ಕೊಂಡ ಹಾಯ್ದು ಬಾಬಯ್ಯ ಹಬ್ಬ ಆಚರಣೆ

17-07--krs1 (3)
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದಲ್ಲಿ ಮುಸ್ಲಿಮರ ಮೊಹರಂ ಕಡೇ ದಿನ ಅಂಗವಾಗಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೂ ಕೊಂಡ ಹಾಕಿ ಅದರ ಸುತ್ತ ನೃತ್ಯ ಮಾಡುತ್ತ ದೇವರ ಘೋಷಣೆ ಕೂಗಿ ಬಾಬಯ್ಯ ಹಬ್ಬ ಆಚರಿಸಲಾಯಿತು.


ಹಿಂದು-ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ಹಿಂದುಗಳು ಕೊಂಡಕ್ಕೆ ಸಾಮಗ್ರಿ ನೀಡಿದ ನಂತರ ಕೊಂಡ ಹಾಯುವ ಸಮಯದಲ್ಲಿ ಭಾಗವಹಿಸಿ ಸಂಭ್ರಮದಿಂದ ಹಬ್ಬ ಆಚರಣೆಗೆ ಜಾತಿ, ಭೇದ ಇಲ್ಲದೆ ಬೆಂಬಲಿಸಿ ಸಹಕಾರ ನೀಡಿದ್ದು ವಿಶೇಷವಾಗಿತ್ತು.


ಬುಧವಾರ ಬೆಳಗ್ಗೆ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಬಾಬಯ್ಯನ ಹಬ್ಬ ಮಾಡುತ್ತಿರುವ ವಂಶಸ್ಥರಾದ ಬಾಬು ಹಸೇನ್-ಹುಸೇನ್ ದೇವರನ್ನು ಹೊತ್ತು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕೊಂಡ ನಡೆಸುತ್ತಿದ್ದ ಜಾಗಕ್ಕೆ ತಂದು ಕೊಂಡ ಹಾಯ್ದರು, ಹರಕೆ ಹೊತ್ತ ಅನೇಕರು ದೇವರನ್ನು ಹೊತ್ತು ಕೊಂಡ ಹಾಯ್ದರು.


ನಂತರ ಮೆರವಣಿಗೆ ಮೂಲಕ ಘೋಷಣೆ ಕೂಗಿ ಹಸೇನ್-ಹುಸೇನ್ ದೇವರನ್ನು ಬಾಬು ಅವರ ಮನೆಯಲ್ಲಿನ ಮೂಲ ಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿ, ಮೊಹರಂ ಕಡೇ ದಿನ ಹಬ್ಬ ಆಚರಣೆ ಮಾಡಿ ಬುಧವಾರ ಸಂಜೆ ಮತ್ತೆ ಮೆರವಣಿಗೆ ಮೂಲಕ ದೇವರನ್ನು ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net