

ಚಿಂತಾಮಣಿ: ನಗರದ ಹೊರವಲಯದ ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯ ಕೋನಪಲ್ಲಿ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಎರಡು ಕಾರು ಮತ್ತು ಅಟೋ ಜಖಂಗೊಂಡಿದ್ದು, ಆಟೋ ಚಾಲಕ ಗಾಯಗೊಂಡಿದ್ದಾನೆ. ಚಿಂತಾಮಣಿಯ ವೆಂಕಟಗಿರಿಕೋಟ ಬಡಾವಣೆಯ ಸಂತೋಷ್ ಗಾಯಾಳು.
ಶಿಡ್ಲಘಟ್ಟದಿಂದ ಮದನಪಲ್ಲಿಗೆ ಹೋಗುತ್ತಿದ್ದ ಕಾರು ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರು ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಚಿಂತಾಮಣಿಯಿಂದ ಕೋನಪ್ಪಲ್ಲಿಗೆ ತೆರಳುತ್ತಿತ್ತು. ಆಟೋ ಚಾಲಕನಿಗೆ ಕಾಲು ಮುರಿದಿದೆ. ಈತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಕಾರು ಮದನಪಲ್ಲಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಪಿ.ಮುರಳೀಧರ್ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.