

ಕಲಬುರಗಿಯ ಚೌಡಯ್ಯ ಭವನದಲ್ಲಿ ಸಚಿವರಿಗೆ ಸನ್ಮಾನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರ್ನಾಟಕದ ಕೋಲಿ, ಕಬ್ಬಲಿಗ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೇಂದ್ರ ಎಂಎಸ್‌ಎAಇ ಖಾತೆ ಸಚಿವ ಭಾನುಪ್ರತಾಪ್ ವರ್ಮಾ ಭರವಸೆ ನೀಡಿದರು.
ರಾಮಮಂದಿರ ಬಳಿಯ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಅಖಿಲ ಭಾರತ ಕೋಲಿ ಸಮಾಜ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಬುಡಕಟ್ಟು ಜನಾಂಗ (ಆರ್‌ಜಿಐ) ಖಾತೆ ಸಚಿವ ಅರ್ಜುನ ಮುಂಡಾ ಜತೆ ಚರ್ಚಿಸಿ ಸೂಕ್ತ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಸಮುದಾಯದ ಜನ ಅನೇಕ ಹಂತದ ಹೋರಾಟ ಮಾಡಿದ್ದು ಗಮನಕ್ಕೆ ಬಂದಿದೆ. ಬೇಡಿಕೆ ವಾಸ್ತವವೂ ಇದೆ. ಹೀಗಾಗಿ ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದಲ್ಲಿ ಈ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕೋಲಿ, ಕಬ್ಬಲಿಗ ಸಮುದಾಯ ಎಸ್‌ಟಿ ಸೇರಿಸಲು ತಮ್ಮ ಪ್ರಯತ್ನ ನಿರಂತರ ಮುಂದುವರಿದಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನ್ಯಾಯ ಸಿಗಲು ವಿಳಂಬವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಖಿಲ ಭಾರತ ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣರಡ್ಡಿ ಮಾತನಾಡಿ, ದೇಶದ ೧೬ ರಾಜ್ಯಗಳಲ್ಲಿ ಎಸ್‌ಸಿ, ೯ ರಾಜ್ಯಗಳಲ್ಲಿ ಎಸ್‌ಟಿ ಪಟ್ಟಿಯಲ್ಲಿ ಕೋಲಿ ಸಮಾಜ ಸೇರ್ಪಡೆಯಾಗಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಕೋಲಿ, ಕಬ್ಬಲಿಗ ಪರ್ಯಾಯ ಪದಗಳು ಎಸ್‌ಟಿಗೆ ಸೇರದೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಉಳಿದಿದೆ. ಹೀಗಾಗಿ ತಾವು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿ ಎಸ್‌ಟಿ ಸೇರ್ಪಡೆಗೆ ಮುಂದಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ನಿವೃತ್ತ ಡಿಎಚ್‌ಒ ಡಾ.ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ಈ ಜಿಲ್ಲೆಯಲ್ಲಿ ಸುಮಾರು ೪.೭೦ ಲಕ್ಷ ಕೋಲಿ ಸಮಾಜದ ಜನಸಂಖ್ಯೆ ಇದೆ. ಆದರೆ ಸಂಘಟನೆ ಕೊರತೆಯಿದೆ. ವಿವಿಧ ರಾಜಕೀಯ ಮುಖಂಡರು ಅವರವರ ಪಕ್ಷ ಹೊರತುಪಡಿಸಿ ಸಮಾಜಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ.ಸಾಯಿಬಣ್ಣ ತಳವಾರ ಮಾತನಾಡಿದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಪ್ರಮುಖರಾದ ಶಿವಶರಣಪ್ಪ ಕೋಬಾಳ, ಶರಣಪ್ಪ ತಳವಾರ, ಡಾ.ಇಂದಿರಾ ಶಕ್ತಿ, ಪುಲಕೇಶಿ ಚೌಧರಿ, ಗಂಗಾಧರ ಇಜೇರಿ, ಅಂಬಣ್ಣ ಜಮಾದಾರ್, ಶಾಂತಪ್ಪ ಕೂಡಿ, ನಾಗಣ್ಣ ಮುಕ್ಕಾ, ಬಾಬುರಾವ ಕೋಬಾಳ, ರಾಜೇಂದ್ರ ರಾಜವಾಳ, ದೇವಿಂದ್ರ ಚಿಗರಳ್ಳಿ, ಅಮರೇಶ ಕಾಮನಕೇರಿ, ಡಾ.ಸರ್ದಾರ್ ರಾಯಪ್ಪ, ರಾಜಶೇಖರ ರಾಮತೀರ್ಥ ಇತರರಿದ್ದರು.