

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿನ ಕೇಸಿನ ಆರೋಪಿತರ ಬಂಧಿಸಬೇಕು. ಶಾಮೀಲಾಗಿರುವ ಪೊಲೀಸರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ ಹಲವು ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯವರು ಮುಖ್ಯರಸ್ತೆಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಮಾಧಾನಗೊಳಿಸಿದರು. ಸಿಐಡಿ ತನಿಖೆಗೆ ವಹಿಸುವ ಭರವಸೆ ನೀಡಿದರೂ, ಪ್ರತಿಭಟನೆ ಹಿಂಪಡೆಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಮುಖಂಡರನ್ನು ಬಂಧಿಸಿ ಪಟ ವಾಹನದಲ್ಲಿ ಮತ್ತು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋದರು. ಬಳಿಕ ಸಂಜೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಯಿತು.
ನಗರದ ಡಿಸಿ ಕಚೇರಿ ಮುಂಭಾಗದ ಸ್ಟೇಷನ್ ಬಜಾರ-ಜಗತ್ ಮುಖ್ಯರಸ್ತೆಯಲ್ಲಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ದೌಡಾಯಿಸಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಎಸ್ಪಿ ಅಡ್ಡೂರು ಶ್ರೀನಿವಾಸಲು, ಪೊಲೀಸ್ ಆಯುಕ್ತ ಆರ್.ಚೇತನ ಇತರರು ಇದ್ದರು. ಸಾವಿನ ಸತ್ಯಾಂಶ ಬಯಲಿಗೆ ತರಲು ನ್ಯಾಯಾಂಗ ತನಿಖೆ ನಡೆಸುವಂತೆ ಪ್ರತಿಭಟನಾಕಾರು ಆಗ್ರಹಿಸಿದರು. ಡಿಸಿಯವರು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಭರವಸೆ ನೀಡಿದರೂ, ಪ್ರತಿಭಟನಾಕಾರರು ಒಪ್ಪಲಿಲ್ಲ. ಡಿಸಿ ಸೇರಿ ಎಲ್ಲರು ಮನವೊಲಿಸುವ ಪ್ರಯತ್ನ ಮಾಡಿದರು ರಸ್ತೆತಡೆ ಕೈಬಿಡಲಿಲ್ಲ. ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡರು.
ಬಿಸಿನಲ್ಲಿ ರಸ್ತೆಯಲ್ಲಿಯೇ ಕುಳಿತುಕೊಂಡರು. ಸುಮಾರು ಹೊತ್ತು ಮುಖ್ಯರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡು ಜನರು ಪರದಾಡುವಂತವಾಯಿತು. ಅದೇ ಮಾರ್ಗದಲ್ಲಿ ಬಿಹಾರ ರಾಜ್ಯಪಾಲರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಆಗಮಿಸುವವರಿದ್ದರು. ಅದನ್ನು ಹೇಳಿ ಮನವೊಲಿಸಿದರು. ಒಪ್ಪಲಿಲ್ಲ. ಆಗ ಹೆಚ್ಚಿನ ಪೊಲೀಸ್ ಸಿಬ್ಭಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡು ಅನಿವಾರ್ಯವಾಗಿ ಮುಖಂಡರನ್ನು ಬಂಧಿಸಲು ಆರಂಭಿಸಿದರು.
ಸಮಿತಿ ಸಂಚಾಲಕ ಅವಣ್ಣ ಮ್ಯಾಕೇರಿ, ಸಮಾಜದ ಮುಖಂಡರಾದ ಶರಣಪ್ಪ ತಳವಾರ,ಸಂತೋಷ ತಳವಾರ, ಸುನೀತಾ ತಳವಾರ, ಬಸವರಾಜ ಹರವಾಳ, ಅಂಬು ಡಿಗ್ಗಿ, ನಿಂಗಣ್ಣ ದೇವಣಗಾಂವ, ಸೋಮಶೇಖರ ಬಿಬ್ಬಳ್ಳಿ, ಬಿ.ಎಸ್.ಐನಾಪುರ. ಬಸವರಾಜ ಸಪ್ಪನಗೋಳ, ನಿಂಗಣ್ಣ ದೇವಣಗಾಂವ, ಗುಂಡು ಐನಾಪುರ, ಮೋಹನ ಪಾಟೀಲ್ ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಪೊಲೀಸ್ ವಾಹನದಲ್ಲಿ ಹತ್ತಿಸಿದರು. ಬೆನ್ನಲ್ಲಿಯೇ ಉಳಿದವರನ್ನು ಚದುರಿಸಿದರು. ಬಳಿಕ ಸಂಚಾರ ಆರಂಭಗೊAಡಿತು. ನಂತರ ಕೋಲಿ ಸಮಾಜದವರು ಡಿಸಿ ಕಚೇರಿ ಮುಂದೆ ಹಾಕಿರುವ ಟೆಂಟ್‌ನಲ್ಲಿ ಮತ್ತೇ ಧರಣಿ ಮುಂದುವರೆಸಿದರು.