ಸ್ಮಶಾನ ಜಾಗಕ್ಕೆ ಕೊಡಿಯಾಲ ಗ್ರಾಮಸ್ಥರ ಆಗ್ರಹ

SRP_21-01jpj
ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಸಂತೇಮಾಳ ವೃತ್ತದಲ್ಲಿ ಶುಕ್ರವಾರ ರಸ್ತೆಗೆ ಅಡ್ಡಲಾಗಿ ಶವ ಇರಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರೊಂದಿಗೆ ತಾಲೂಕು ಆಡಳಿತ ಅಧಿಕಾರಿಗಳು ಅರಕೆರೆ ಠಾಣೆ ಪೊಲೀಸ ಮನವೊಲಿಸಲು ಮುಂದಾಗಿದ್ದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಜನರಿಗೆ ಪ್ರತ್ಯೇಕ ಸ್ಮಶಾನ ನೀಡುವಂತೆ ಆಗ್ರಹಿಸಿ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಅಡ್ಡ ಇರಿಸಿ ರಸ್ತೆ ತಡೆ ಮಾಡುವ ಮೂಲಕ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೊಡಿಯಾಲ ಗ್ರಾಮದ ಸಂತೇಮೈದಾನದ ವೃತ್ತದಲ್ಲಿ ಜಮಾವಣೆಗೊಂಡ ಮಾದಿಗ ಸಮುದಾಯದ ಜನರು ಮಂಡ್ಯ-ಅರಕೆರೆ-ಎಲಿಯೂರು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ತ್ರಿಕೋನ ರಸ್ತೆಯನ್ನು ಸುಮಾರು 2 ತಾಸಿಗೂ ಹೆಚ್ಚು ಕಾಲ ಅಡ್ಡಗಟ್ಟಿ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟುಹಿಡಿದು ಸುಡು ಬಿಸಿಲಿನ ನಡುವೆಯೇ ಶವ ಇರಿಸಿಕೊಂಡು ಧರಣಿ ಕುಳಿತರು.

ವಿಷಯ ತಿಳಿದು ಅರಕೆರೆ ಉಪತಹಸೀಲ್ದಾರ್ ದಿನೇಶ್, ತಾಲೂಕು ಪಂಚಾಯಿತಿ ಇಒ ವೇಣು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೇಘ, ಅರಕೆರೆ ಠಾಣೆ ಪಿಎಸ್‌ಐ ವಿನೋದ್ ಕುಮಾರ್, ಪಿಡಿಒ ಮಹೇಶ್ ಹಾಗೂ ಸರ್ವೇ ಅಧಿಕಾರಿ ಸ್ಥಳಕ್ಕೆ ದೌಡಾಯಿಸಿದರು. ಸಮಸ್ಯೆ ಬಗೆಹರಿಸುವುದಾಗಿ ಹೇಳಿ ರಸ್ತೆ ತಡೆ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಇದಕ್ಕೆ ಜಗ್ಗದ ಧರಣಿ ನಿರತ ಜನರು ಸರ್ಕಾರ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಪತಹಸೀಲ್ದಾರ್ ದಿನೇಶ್ ಮಾತನಾಡಿ, ಗ್ರಾಮ ಹೊರವಲಯದ ಸರ್ವೇ ನಂ.89ರಲ್ಲಿನ 2.11ಗುಂಟೆ ಪ್ರದೇಶದಲ್ಲಿ ಹಿಂದು ಜನಾಂಗದ ಸಾರ್ವಜನಿಕ ಸ್ಮಶಾನವನ್ನು ಸರ್ಕಾರ ನೀಡಿದ್ದು, ನೀವೂ ಸಹ ಅದನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಆದರೆ ಇದಕ್ಕೊಪ್ಪದ ಸಮುದಾಯದ ಜನರು ನಮ್ಮ ಸಮುದಾಯದಲ್ಲಿ ತಲತಲಾಂತರದಿಂದಲೂ ಈ ಪದ್ಧತಿ ನಡೆದು ಬಂದಿಲ್ಲ, ಹೀಗಾಗಿ ನಮಗೆ ಪ್ರತ್ಯೇಕ ಸ್ಮಶಾನ ಬೇಕೆಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಾ.ಬಾಬು ಜಗಜೀವನರಾಮ್ ಸಂಘಟನೆ ತಾಲೂಕು ಅಧ್ಯಕ್ಷ ಆಟೋ ಶಂಕರ್ ಮಾತನಾಡಿ, ನಮ್ಮ ಸಮುದಾಯ ಜನರು ಮೃತಪಟ್ಟ ಸಂದರ್ಭದಲ್ಲಿ ಗ್ರಾಮದೊಳಗಿನ ಬೋರೇದೇವರಸ್ವಾಮಿ ದೇಗುಲದ ರಾಜಬೀದಿಯಲ್ಲಿ ಶವಗಳನ್ನು ಕೊಂಡೊಯ್ಯುವ ಪ್ರತೀತಿ ಈ ಹಿಂದಿನಿಂದಲೂ ನಡೆದು ಬಂದಿಲ್ಲ. ಸರ್ಕಾರ ನೀಡಿರುವ ಸ್ಮಶಾನಕ್ಕೆ ಅದೇ ರಸ್ತೆಯಲ್ಲಿ ಕೊಂಡೊಯ್ಯಬೇಕಿದ್ದು, ಇದನ್ನು ತಪ್ಪಿಸಲು ಹಿಂದೆ 1994ರಲ್ಲಿ ನಮ್ಮ ಜನರು ಪ್ರತಿಭಟಿಸಿದ್ದ ವೇಳೆ ಸರ್ಕಾರ ಅಂದು 1 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ತಾಲೂಕು ಆಡಳಿತ ಸಶ್ಮಾನವನ್ನು ಗುರುತು ಮಾಡಿ ತೋರಿಸಲೇ ಇಲ್ಲ. ತದನಂತರ 2017ರಲ್ಲಿ ಸರ್ವೇ ನಂ.84ರಲ್ಲಿ 30 ಗುಂಟೆ ಸ್ಥಳ ನೀಡಿದ್ದು, ಆ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆ ಅಲ್ಲಿ ಸುಡಲು ಹಾಗೂ ಹೂಳಲು ಅವಕಾಶ ನೀಡಿತೆ ಹೊರತು ಸಮುದಾಯದ ಹೆಸರಿಗೆ ಜಾಗ ಮಂಜೂರು ಮಾಡಿ ಹದ್ದುಬಸ್ತು ಮಾಡಿಕೊಡಲು ಸಾಕಷ್ಟು ವಿರೋಧ ಎದುರಾಯಿತು. ಈಗಲಾದರೂ ಈ ಸಮಸ್ಯೆ ಇತ್ಯರ್ಥಗೊಳ್ಳಲೇ ಬೇಕಿದ್ದು, ನಮಗೆ ಶಾಶ್ವತ ಪರಿಹಾರ ಬೇಕು ಎಂದು ಪಟ್ಟು ಹಿಡಿದರು.

ಸಮುದಾಯದ ಜನರ ಹೋರಾಟಕ್ಕೆ ದನಿಯಾಗಿ ಆಗಮಿಸಿದ್ದ ಹಿರಿಯ ಮುಖಂಡರಾದ ಯತೀಶ್, ಕಾಮರಾಜು, ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡರ ನಿರ್ದೇಶನದ ಮೇರೆಗೆ ಸಮುದಾಯದ ಯಜಮಾನ್ ಶಿವಣ್ಣ, ಸ್ವಾಮಣ್ಣ, ಸಿ.ಸ್ವಾಮಿ ಮತ್ತು ಸುರೇಶ್ ಅವರ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕೆಲಕಾಲ ಚರ್ಚಿಸಿದ್ದು, ಗ್ರಾಮದ ಹೊರಭಾಗದ ವಿಶ್ವೇಶ್ವರ ನಾಲೆ ಪಕ್ಕದ ನಾಲಾ ಖರಾಬು ಸರ್ವೇ ನಂ.16/1ರಲ್ಲಿ ಸ್ಥಳವನ್ನು ಕಲ್ಪಿಸುವುದಾಗಿ ತಿಳಿಸಿದ್ದು, ಈ ವಿಚಾರವನ್ನು ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನಕಾರರು ಪ್ರಸ್ತುತ ತಾಲೂಕು ಆಡಳಿತದ ಅಧಿಕಾರಿಗಳು ಗುರುತು ಮಾಡಿ ತೋರಿಸಿದ ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಸಲು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ತೆರಳಿದರು.

ವಾಹನ ಸಂಚಾರ ಅಸ್ತವ್ಯಸ್ತ: ರಸ್ತೆ ತಡೆಯಿಂದ ಸುಮಾರು 2 ಕಿ.ಮೀ. ವರೆಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಮುದಾಯದ ಜನರ ದಿಢೀರ್ ಪ್ರತಿಭಟನೆಯಿಂದ ಸಮಸ್ಯೆಗೊಳಗಾದ ಇತರ ಗ್ರಾಮಗಳ ವಾಹನ ಸವಾರರು ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿಗಿಳಿದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬಸ್‌ಗಳು ಹಾಗೂ ಖಾಸಗಿ ವಾಹನಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಎಲ್ಲಿಯೂ ತೆರಳಲು ಸಾಧ್ಯವಾಗದೆ ಹೈರಾಣರಾದರು.

ಡಾ.ಬಾಬು ಜಗಜೀವನರಾಮ್ ಸಂಘಟನೆ ಜಿಲ್ಲಾಧ್ಯಕ್ಷ ಸಿದ್ದರಾಜು, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಹೇಮಂತ್, ಸುರೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net