

ತುಮಕೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಕೊಬ್ಬರಿಗೆ ಬೆಂಬಲಬೆಲೆ, ಕೃಷಿ ಕಾಯ್ದೆ ವಾಪಸ್, ಕೃಷಿ ಕಾರ್ಯಕ್ಕೆ ಸಮರ್ಪಕ ವಿದ್ಯುತ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆ.26 ರಿಂದ ಅ.4ರವರೆಗೆ ಹಾಸನದ ಅರಸೀಕೆಯಿಂದ ವಿಧಾನಸೌಧವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನೀಡಬೇಕು, ಹೆಚ್ಚುವರಿಯಾಗಿ 50 ಸಾವಿರ ಮೆಟ್ರಿಜ್ ಟನ್ ಕೊಬ್ಬರಿ ಖರೀದಿಸಬೇಕು. ಸಹಾಯಧನವನ್ನು 1250 ರೂ., ಗಳಿಂದ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು. ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಸೆ.26ರಂದು ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಿಂದ ಪಾದಯಾತ್ರೆ ಆರಂಭಿಸಲಿದ್ದು ಅ.4 ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೀರುಗಂಟಿ ನಾ ?: ರಾಜ್ಯದಲ್ಲಿಯೇ ಶೇ. 70ರಷ್ಟು ಮಳೆ ಕೊರತೆ ಇದೆ ಎಂಬುದನ್ನು ಸಿದ್ದರಾಮಯ್ಯ ಹೇಳಿದ್ದು ಕಾವೇರಿ ಪ್ರಾಧಿಕಾರ ಹೇಳಿದಂತೆ ನೀರು ಬಿಡಲು ಕರ್ನಾಟಕ ಏನು ನೀರುಗಂಟಿಯೇ ? ಬರದ ಸಂಕಷ್ಟದಲ್ಲು ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಅಗತ್ಯವೇನಿತ್ತು? ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ತಪ್ಪು ಮಾಡಿದೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೀರು ಹರಿಸಲೇ ಇಲ್ಲ, ಸುಪ್ರೀಂಕೋರ್ಟ್ ಅವರನ್ನು ಬಂಧಿಸಿತಾ? ಅಂತಹ ಧೈರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆಯೇ? ಅಂತಹ ದಿಟ್ಟತನವನ್ನು ಸಿದ್ದರಾಮಯ್ಯ ಪ್ರದರ್ಶಿಸಬೇಕು ಎಂದರು.