

ಮಡಿಕೇರಿ
ಮಕ್ಕಳಿಂದ ಜಂಕ್ ಫುಡ್ ದೂರವಿಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಹೇಳಿದರು. ಅರೆಕಾಡು ಗ್ರಾಮದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮ, ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ನೋಂದಣಿ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಪೋಷಣ್ ಮಾಸಾಚರಣೆಗೆ ಮಹತ್ವ ನೀಡಲಾಗುತ್ತಿದೆ. ಮಕ್ಕಳಿಗೆ ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರ ನೀಡಬೇಕು. ದಿನನಿತ್ಯದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ನಡಿಗೆ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಬೋಹೈಡ್ರೇಟ್‌ಯುಕ್ತ ಆಹಾರವನ್ನು ಮಿತವಾಗಿ ಸೇವಿಸಿ, ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಪದ್ಧತಿಯಲ್ಲಿ ಆರೋಗ್ಯಕರ ಬದಲಾವಣೆ ಮಾಡಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕರಾದ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿಯೂ ಕಾರ್ಯರೂಪಕ್ಕೆ ತರಬೇಕು. ಮಕ್ಕಳ ಬೆಳವಣಿಗೆಯ ಮೈಲಿಗಲ್ಲುಗಳನ್ನು ನಿಯಮಿತವಾಗಿ ಗಮನಿಸಿ, ಯಾವುದೇ ಬೆಳವಣಿಗೆ ವಿಳಂಬ ಅಥವಾ ಅಂಗವೈಕಲ್ಯದ ಲಕ್ಷಣಗಳು ಕಂಡುಬAದಲ್ಲಿ ಆರಂಭಿಕ ಹಂತದಲ್ಲಿಯೇ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಗು ಗರ್ಭಧಾರಣೆಯಿಂದ ಎರಡು ವರ್ಷದವರೆಗೆ ಇರುವ ಮೊದಲ 1 ಸಾವಿರ ದಿನಗಳ ಮಹತ್ವವನ್ನು ವಿವರಿಸಿದ ಅವರು, ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಅಗತ್ಯವಿರುವ ಪೌಷ್ಟಿಕ ಆಹಾರ ನೀಡುವುದು ಅತ್ಯಂತ ಮುಖ್ಯ. ಪೌಷ್ಟಿಕ ಆಹಾರದ ಜೊತೆಗೆ ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ಭಾವನಾತ್ಮಕ ಸದೃಢತೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ವಾಡಿಗೆರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆ ಹೆಚ್ಚುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬೆಳಗಿನ ಉಪಾಹಾರವನ್ನು ಪೌಷ್ಟಿಕವಾಗಿ ಹಾಗೂ ಸಮರ್ಪಕವಾಗಿ ಸೇವಿಸಿ, ಮಧ್ಯಾಹ್ನ ಸಮತೋಲನ ಆಹಾರ ತೆಗೆದುಕೊಂಡು, ರಾತ್ರಿ ಹಗುರವಾದ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಾರಿನಂಶ, ಕಬ್ಬಿಣಾಂಶ, ವಿಟಮಿನ್‌ಗಳು ಹಾಗೂ ಪ್ರೋಟೀನ್‌ಯುಕ್ತ ಸಮತೋಲನ ಆಹಾರ ಸೇವಿಸಬೇಕು ಎಂದು ಹೇಳಿದರು.
ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಅರೆಕಾಡು ಗ್ರಾಮದ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪ, ಹರಿಣಾಕ್ಷಿ, ಅನಿಲ, ಸವಿತಾ ಇದ್ದರು.