

ಮಡಿಕೇರಿ
ಪಟ್ಟಣಗಳ ಪ್ರತಿ ರಸ್ತೆ, ಗಲ್ಲಿಗಳನ್ನು ಸ್ವಚ್ಛಗೊಳಿಸಿ ನಾಗರಿಕರ ಆರೋಗ್ಯ ರಕ್ಷಿಸುವ ಪೌರಕಾರ್ಮಿಕರು ಸಮಾಜದ ಬೆನ್ನೆಲುಬು. ಪ್ರತಿ ವರ್ಷ ಸೆಪ್ಟೆಂಬರ್ 23ರಂದು ಪೌರಕಾರ್ಮಿಕರ ದಿನ ಆಚರಿಸಿ, ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಆದರೆ, ಈ ದಿನಾಚರಣೆಗಳು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗದೆ, ಅವರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ದಿನವಾಗಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಪೌರಕಾರ್ಮಿಕರು ಈಗಲೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ಗ್ಲೌಸ್, ಮಾಸ್ಕ್, ಗಮ್‌ಬೂಟ್ ಹಾಗೂ ರಕ್ಷಣಾ ಉಪಕರಣಗಳಿಲ್ಲದೆ ಕಸ ವಿಂಗಡಣೆ ಮತ್ತು ಸ್ವಚ್ಛತೆ ಮಾಡಬೇಕಾದ ಅನಿವಾರ್ಯತೆ ಇದೆ. ಬಹುತೇಕ ಕಡೆಗಳಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಜೀವನ ನಿರ್ವಹಣೆ ಕಷ್ಟವಾಗಿದೆ.
ಸಮಾಜದಲ್ಲಿ ಇಂದಿಗೂ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವಾಗ ಅನುಚಿತ ವರ್ತನೆ ಹಾಗೂ ದೌರ್ಜನ್ಯಗಳನ್ನು ಎದುರಿಸಬೇಕಾದ ಸ್ಥಿತಿ ಇದೆ. ವಿಶ್ರಾಂತಿ ಕೊಠಡಿ, ಶೌಚಾಲಯ, ಕುಡಿಯುವ ನೀರು ಮತ್ತು ಕಸ ತಂದ ನಂತರ ಕೈ-ಕಾಲು ತೊಳೆಯಲು ಸೂಕ್ತ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ.
ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಉಳಿದಿರುವ ಎಲ್ಲಾ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ಸರ್ಕಾರದ ನೇರ ಪಾವತಿ ವ್ಯಾಪ್ತಿಗೆ ತರಬೇಕು. ಪ್ರತಿಯೊಬ್ಬ ಕಾರ್ಮಿಕನಿಗೂ ಉಚಿತವಾಗಿ ಮಾಸಿಕ ಆರೋಗ್ಯ ತಪಾಸಣೆ ಒದಗಿಸಬೇಕು. ಪ್ರಾಣಾಪಾಯ ಅಥವಾ ಗಂಭೀರ ಕಾಯಿಲೆಗಳಿಗೆ ತುತ್ತಾದರೆ ಸೂಕ್ತ ವೈದ್ಯಕೀಯ ವಿಮೆ ಮತ್ತು ಪರಿಹಾರ ನೀಡಬೇಕು.
ಕಸ ಸಂಗ್ರಹಣೆ ಹಾಗೂ ಚರಂಡಿ ಸ್ವಚ್ಛತೆಗೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಬೇಕು. ಪೌರಕಾರ್ಮಿಕರ ಕುಟುಂಬಗಳಿಗೆ ಸುಸಜ್ಜಿತ ಉಚಿತ ವಸತಿ ಯೋಜನೆ ಮತ್ತು ಅವರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿಶೇಷ ವ್ಯವಸ್ಥೆ ಹಾಗೂ ವಿದ್ಯಾರ್ಥಿವೇತನ ನೀಡಬೇಕು ಎನ್ನುವ ಬೇಡಿಕೆಗಳಿವೆ.