ಹಲಸಿನ ಸುವಾಸನೆಗೆ ಕಾಡಾನೆಗಳ ದಾಳಿ

ಕಾಫಿ ತೋಟಗಳಲ್ಲಿ ಬೆಳೆಯುವ ಹಲಸಿನ ಕಾಯಿಗಳನ್ನು ಕಡಿದಿರುವುದು.
ಕಾಫಿ ತೋಟಗಳಲ್ಲಿ ಬೆಳೆಯುವ ಹಲಸಿನ ಕಾಯಿಗಳನ್ನು ಕಡಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತೋಟಗಳಲ್ಲಿ ಹಲಸು ಕಡಿದ ಬೆಳೆಗಾರರು
  • ಶಾಶ್ವತ ಪರಿಹಾರಕ್ಕೆ ಒತ್ತಾಯ
ಸಿದ್ದಾಪುರ: ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆಗಾರರು ಬಳಲಿ ಬೆಂಡಾಗುತ್ತಿದ್ದಾರೆ. ಪದೇ ಪದೆ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೆ ದಾಳಿ ಮಾಡುತ್ತಿರುವುದನ್ನು ತಪ್ಪಿಸಲು ರೈತರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಇದನ್ನು ತಡೆಯಲು ಬೆಳೆಗಾರರು ಕೈಗೊಂಡಿರುವ ಹೊಸ ಕ್ರಮ ಗಮನ ಸೆಳೆದಿದೆ. ಕಾಫಿ ತೋಟಗಳಲ್ಲಿ ಬೆಳೆಯುವ ಹಲಸಿನ ಕಾಯಿಗಳನ್ನು ಕಡಿದು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ದೃಶ್ಯ ಇದೀಗ ಸಾಮಾನ್ಯವಾಗಿದೆ. ಸಿದ್ದಾಪುರ, ನೆಲ್ಯಹುದಿಕೇರಿ, ಕರಡಿಗೋಡು, ವಾಲ್ನೂರು ತ್ಯಾಗತ್ತೂರು, ಮಾಲ್ದಾರೆ, ಇಂಜಿಲಗೆರೆ, ಪಳ್ಳಕೆರೆ, ಪಾಲಿಬೆಟ್ಟ ಸೇರಿದಂತೆ ಅರೆಕಾಡು ಪ್ರದೇಶಗಳಲ್ಲಿ ರೈತರು ಕಾಡಾನೆ ಹಾವಳಿ ತಪ್ಪಿಸಿಕೊಳ್ಳಲು ತೋಟಗಳಲ್ಲಿರುವ ಹಲಸುಗಳನ್ನು ರೈತರು ಕಡಿಯುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ರೈತರು ಆತಂಕದಲ್ಲಿ ಬದುಕುತ್ತಿದ್ದಾರೆ. ಕಾಫಿ ತೋಟಗಳಿಗೆ ಗುಂಪು ಗುಂಪಾಗಿ ದಾಳಿ ಮಾಡುವ ಕಾಡಾನೆಗಳು ಬೆಳೆಗಳನ್ನು ಹಾನಿಗೊಳಿಸುತ್ತಿವೆ. ಒಂದು ಬಾರಿ 15 ರಿಂದ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿದರೆ ಕಾಫಿ, ಮೆಣಸು, ಅಡಿಕೆ, ತೆಂಗು ಸೇರಿದಂತೆ ಎಲ್ಲ ಬೆಳೆಗಳು ನಾಶ ಮಾಡುತ್ತಿವೆ. ಇದರಿಂದ ವರ್ಷಪೂರ್ತಿ ಮಾಡಿದ ಶ್ರಮ ಕ್ಷಣಾರ್ಧದಲ್ಲಿ ಹಾಳಾಗುತ್ತಿದೆ.
ಆಕರ್ಷಣೆಯ ಮೂಲ ಹಲಸು: ಕಾಡಾನೆಗಳಿಗೆ ಹಲಸಿನ ಹಣ್ಣು ಬಹಳ ಇಷ್ಟವಾದ ಆಹಾರ. ಹಲಸಿನ ಸುವಾಸನೆ ದೂರದಿಂದಲೇ ಕಾಡಾನೆಗಳನ್ನು ಆಕರ್ಷಿಸುತ್ತದೆ. ಇದೇ ಕಾರಣದಿಂದ ಕಾಫಿ ತೋಟಗಳಲ್ಲಿ ಹಲಸಿನ ಮರಗಳಿರುವುದು ಕಾಡಾನೆಗಳ ಪ್ರವೇಶಕ್ಕೆ ಕಾರಣವಾಗುತ್ತಿದೆ. ವರ್ಷಕ್ಕೊಮ್ಮೆ ಸಿಗುವ ಹಲಸಿನ ಫಲವೂ ಕಾಡಾನೆಗಳ ಪಾಲಾಗುತ್ತಿದ್ದು, ಬೆಳೆಗಾರರಿಗೆ ನಷ್ಟದ ಮೇಲೆ ನಷ್ಟ ಉಂಟಾಗುತ್ತಿದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರೈತರು ತಮ್ಮ ತೋಟಗಳಲ್ಲಿ ಇರುವ ಹಲಸಿನ ಕಾಯಿಗಳನ್ನು ಪೂರ್ವದಲ್ಲೇ ಕಡಿದು ತೋಟದಿಂದ ಹೊರ ಹಾಕುತ್ತಿದ್ದಾರೆ. ತೋಟದೊಳಗೆ ಹಲಸಿನ ಹಣ್ಣುಗಳ ವಾಸನೆ ಇರದಿದ್ದರೆ ಕಾಡಾನೆಗಳು ಅತ್ತ ಬರುವುದಿಲ್ಲ ಎಂಬ ನಂಬಿಕೆ ರೈತರಲ್ಲಿದೆ. ಹೀಗಾಗಿ, ಹಲಸಿನ ಕಾಯಿಗಳನ್ನು ರಸ್ತೆ ಬದಿಯಲ್ಲಿ ಸುರಿದು ಕಾಡಾನೆಗಳನ್ನು ತೋಟದಿಂದ ದೂರ ಇಡುವ ಪ್ರಯತ್ನ ಮಾಡಲಾಗುತ್ತಿದೆ.
ಇದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ?: ತಾತ್ಕಾಲಿಕವಾಗಿ ಈ ಕ್ರಮ ಫಲ ನೀಡಬಹುದಾದರೂ, ಇದು ಶಾಶ್ವತ ಪರಿಹಾರವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲಸಿನ ಹಣ್ಣುಗಳನ್ನು ತೆಗೆದರೂ ಕಾಫಿ ತೋಟಗಳಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರ ಮತ್ತು ನೀರು ಲಭ್ಯವಿರುವುದರಿಂದ ಅವುಗಳು ಮತ್ತೆ ತೋಟಗಳಿಗೆ ಬರುತ್ತವೆ. ಹೀಗಾಗಿ ಈ ಕ್ರಮ ಕೇವಲ ತಾತ್ಕಾಲಿಕವಾಗಿ ಉಪಯೋಗವಾಗಲಿದೆ ಎಂದರು.
ಕಾಫಿ ತೋಟವೇ ಆವಾಸ: ಅರಣ್ಯ ಪ್ರದೇಶಗಳ ಸಮೀಪದಲ್ಲಿರುವ ಕಾಫಿ ತೋಟಗಳು ಈಗ ಕಾಡಾನೆಗಳ ಆವಾಸ ಸ್ಥಳಗಳಾಗಿವೆ. ನೆರಳು, ನೀರು ಮತ್ತು ಆಹಾರ ವ್ಯವಸ್ಥೆ ಇರುವುದರಿಂದ ಕಾಡಾನೆಗಳು ಕಾಡಿನಿಂದ ಹೊರಬಂದು ತೋಟಗಳಲ್ಲಿ ನೆಲೆಸುತ್ತಿವೆ. ಇದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಕಾಡಾನೆಗಳ ಸಂಚಾರ ಮಾರ್ಗಗಳನ್ನು ಗುರುತಿಸಿ ರಕ್ಷಣೆ ಒದಗಿಸುವುದು, ವಿದ್ಯುತ್ ಕಂಬಿ ಬೇಲಿ, ಸೌರಬೇಲಿ, ಹಾಗೂ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಅಲ್ಲದೆ ರೈತರಿಗೆ ಪರಿಹಾರವನ್ನು ತ್ವರಿತವಾಗಿ ನೀಡುವುದರಿಂದ ಅವರ ಸಂಕಷ್ಟವನ್ನು ಕಡಿಮೆ ಮಾಡಬಹುದು.
ಹಲಸಿನ ಕಾಯಿಗಳನ್ನು ಕಡಿದು ತೋಟದಿಂದ ಹೊರ ಹಾಕುವ ಕ್ರಮ ರೈತರ ಅಸಹಾಯಕ ಸ್ಥಿತಿಯನ್ನು ತೋರಿಸುತ್ತದೆ. ಕಾಡಾನೆಗಳ ಹಾವಳಿಯಿಂದ ಕಾಫಿ ತೋಟಗಳು ಅಪಾಯದಲ್ಲಿದ್ದು, ರೈತರು ತಮ್ಮ ಜೀವನೋಪಾಯ ಉಳಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದರೆ, ಮುಂದಿನ ದಿನಗಳಲ್ಲಿ ಕೃಷಿ ಹಾಗೂ ವನ್ಯಜೀವಿ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net