ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ಘಟಕ, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಯೋಗದೊಂದಿಗೆ ಏರ್ಪಡಿಸಿರುವ ಕ್ರಿಸ್ಮಸ್ ಗಾನ ತರಂಗ ಗಾಯನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆಂಟೋನಿ ರಾಬಿನ್, ಜೋಕಿಂ ರಾಡ್ರಿಗಸ್, ಸ್ಟಾಲಿನ್, ಅಂಥೋನಿ ಜೋಸೆಫ್ ಇದ್ದರು.
ವಿರಾಜಪೇಟೆ:ಕ್ರಿಸ್ಮಸ್ ಹಬ್ಬ ಋತುವಿನ ಸಂತೋಷ ಮತ್ತು ಸದ್ಭಾವನೆಯನ್ನು ಆಚರಿಸಲು ಪ್ರೀತಿ, ಶಾಂತಿ ಮತ್ತು ಏಕತೆ ಸಂದೇಶಗಳನ್ನು ಹರಡಲು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಆಂಟೋನಿ ರಾಬಿನ್ ಹೇಳಿದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ಘಟಕ ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯ ಸಹಯೋಗದೊಂದಿಗೆ ಇತ್ತೀಚೆಗೆ ಏರ್ಪಡಿಸಿದ್ದ ಕ್ರಿಸ್ಮಸ್ ಗಾನ ತರಂಗ- 2025 ಗಾಯನ ಸ್ಪರ್ಧೆ ಪೋಸ್ಟರ್ ಬಿಡುಗಡೆ ಮಾತನಾಡಿದರು. ಗಾಯನ ಸ್ಪರ್ಧೆಯನ್ನು ಡಿ.7ರಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯು ಕ್ರಿಸ್ಮಸ್ ಹಬ್ಬದ ಸಂದೇಶವಾದ ಶಾಂತಿ ಮತ್ತು ಪ್ರೀತಿಯನ್ನು ಹಂಚಿಕೊಳ್ಳುವ ಒಂದು ಉತ್ತಮ ವೇದಿಕೆಯಾಗಿದೆ. ಹದಿನೈದು ವರ್ಷಗಳಿಂದ ಸಮುದಾಯದ ಒಗ್ಗಟ್ಟಿಗೆ ಹಾಗೂ ನಮ್ಮ ಸಂಸ್ಕೃತಿಯ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ಶ್ರಮಿಸುತ್ತಿದೆ. ಮೂರು ವರ್ಷಗಳಿಂದ ಕ್ರಿಸ್‌ಮಸ್ ಗಾಯನ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್ ಮಾತನಾಡಿ, ಕ್ರೈಸ್ತರೆಲ್ಲ ಒಂದೇ ಎನ್ನುವ ಭಾವನೆ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಎಲ್ಲರೂ ಒಂದೆಡೆ ಸೇರಲು ವೇದಿಕೆಯಾಗಿಲಿದೆ ಎಂದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ತಾಲೂಕು ಉಪಾಧ್ಯಕ್ಷ ಆಂತೋನಿ ಜೋಸೆಫ್, ಕಾರ್ಯದರ್ಶಿ ಸ್ಟಾಲಿನ್, ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.