ಸುಂಟಿಕೊಪ್ಪ: ಕಂಬಿಬಾಣೆಯಿಂದ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿದ್ದು, ಈ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಿದೆ.
ಕಂಬಿಬಾಣೆ-ಚಿಕ್ಲಿಹೊಳೆ ವ್ಯಾಪ್ತಿಯ ಜನತೆ ಕೂಗು ಅರಣ್ಯರೋದನವಾಗಿಯೇ ಉಳಿಕೊಂಡಿರುವುದಕ್ಕೆ ಈ ಮಾರ್ಗವೇ ಸಾಕ್ಷಿ. ಈ ವ್ಯಾಪ್ತಿಯಲ್ಲಿ ಒಂದೆಡೆ ವನ್ಯಪ್ರಾಣಿಗಳ ಹಾವಳಿಯಾದರೆ, ಮತ್ತ್ತೊಂದೆಡೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದು. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆಯಾದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲಸ ಮಾತ್ರ ಆಗಿಲ್ಲ.
ಕಂಬಿಬಾಣೆಯಿಂದ 4 ಕಿಮೀ ದೂರದಲ್ಲಿ ಚಿಕ್ಲಿಹೊಳೆ ಜಲಾಶಯವಿದ್ದು, ಇಲ್ಲಿಂದ ರಂಗಸಮುದ್ರದ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ಸುಮಾರು 2 ಕಿಮೀ ರಸ್ತೆ ಗುಂಡಿಗಳಿಂದ ಕೂಡಿದ್ದು, ರಸ್ತೆಯ ಇಕ್ಕೆಲೆಗಳು ಮೀಸಲು ಆನೆಕಾಡು ಪ್ರದೇಶವಾಗಿದೆ. ಆಳೆತ್ತರಕ್ಕೆ ಗಿಡಗಂಟಿ ಬೆಳೆದು ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ.
ಇಷ್ಟೆಲ್ಲ ಸಮಸ್ಯೆಯಿದ್ದರೂ ಅರಣ್ಯ ಇಲಾಖೆ ಸಂಬಂಧವೇ ಇಲ್ಲದಂತಿದೆ ಎಂಬುದು ಗ್ರಾಮಸ್ಥರ ದೂರು. ಈ ಭಾಗದಿಂದ ನೂರಾರು ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ವಾಹನ, ಖಾಸಗಿ ವಾಹನಗಳು ರಸ್ತೆ ಹಳ್ಳಗಳಿಂದ ಆಗಿಂದಾಗ್ಗೆ ದುರಸ್ತಿಗೆ ಬರುತ್ತಿವೆ.
ಈ ರಸ್ತೆಯು ಚಿಕ್ಲಿಹೊಳೆ ಹಾಗೂ ರಂಗಸಮುದ್ರ-ನಂಜರಾಯಪಟ್ಟಣಕ್ಕೆ ಸಂಪರ್ಕ ಕಲ್ಪಿಸಲಿದ್ದು, ನಿತ್ಯ ನೂರಾರು ಪ್ರವಾಸಿಗಾರು ಪ್ರವಾಸಿ ತಾಣಕ್ಕೆ ಈ ಮಾರ್ಗದಲ್ಲೇ ಸಂಚರಿಸುತ್ತಾರೆ. ಎದುರಿನಿಂದ ಬರುವ ವಾಹನಗಳಿಗೆ ದಾರಿ ಬಿಡುವ ಸಲುವಾಗಿ ಮತ್ತೊಂದು ವಾಹನ ಗುಂಡಿಗೆ ಬಿದ್ದು ಬಿಡಿಭಾಗಗಳು ಕಳಚಿ ಬಿದ್ದ ಸಾಕಷ್ಟು ಪ್ರಸಂಗಗಳು ನಡೆದಿವೆ. ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಒಂದು ಭಾಗ ಅರಣ್ಯ ಪ್ರದೇಶವಾಗಿದ್ದು, ಮತ್ತೊಂದು ಭಾಗದಲ್ಲಿ ತೋಟ ವಾಸದ ಮನೆಗಳಿವೆ. ನಿತ್ಯ ಈ ಭಾಗದಲ್ಲಿ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳು ಸುತ್ತಮುತ್ತಲಿನ ಕೃಷಿ ಜಮೀನು ಮತ್ತು ತೋಟಗಳಿಗೆ ಆಹಾರ ಅರಸಿ ನುಗ್ಗುತ್ತವೆ. ಇಂತಹ ಸಂದರ್ಭದಲ್ಲಿ ಅನಾಹುತ ಸಂಭವಿಸಿದರೆ ದೇವರೇ ಗತಿ ಎಂಬುದು ಈ ಭಾಗದ ಜನರ ಅಳಲು.
ಈ ಮಾರ್ಗದ ರಸ್ತೆ ಹೊಂಡವಾಗಿ ಪರಿವರ್ತನೆಯಾಗಿರುವುದರಿಂದ ಮಕ್ಕಳು ಶಾಲೆಗಳಿಗೆ ನಡೆದುಕೊಂಡು ಹೋಗುವ ಸಂದರ್ಭ ವಾಹನಗಳು ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಕೆಸರು ನೀರು ಬಟ್ಟೆಗೆ ರಾಚಿರುವ ಹಲವು ಉದಾಹರಣೆ ಇದೆ. ಕೆಸರು ಮೆತ್ತಿಕೊಂಡ ಬಳಿಕ ಬಟ್ಟೆ ತೊಳೆದು ಒದ್ದೆ ಬಟ್ಟೆಯಲ್ಲೇ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಮಕ್ಕಳು ತಮ್ಮ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.