ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಕಕ್ಕಡ ತೀನಿ ನಮ್ಮೆ ಸಭಾ ಕಾರ್ಯಕ್ರಮವನ್ನು ಲೇಖಕಿ ಐಚಂಡ ರಶ್ಮಿ ಪೂವಮ್ಮ ಉದ್ಘಾಟಿಸಿದರು.
ಸಮಾಜದ ಮಕ್ಕಳಿಗೆ ಭಾಷೆ ಹಾಗೂ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದು ಲೇಖಕಿ, ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಐಚಂಡ ರಶ್ಮಿ ಪೂವಮ್ಮ ಹೇಳಿದರು.
ಕೊಡವ ಸಮಾಜದ ಹರದಾಸ ಅಪ್ಪ ನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಭಾನುವಾರ ಪೊಮ್ಮಕ್ಕಡ ಪರಿಷತ್ ನಾಪೋಕ್ಲು ವತಿಯಿಂದ ಆಯೋಜಿಸಿದ್ದ್ದ ಕಕ್ಕಡ ತೀನಿ ನಮ್ಮೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ. ಜತೆಗೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಜನಾಂಗ ರೂಢಿಸಿಕೊಳ್ಳಬೇಕು ಎಂದರು.
ಒಂದನೇ ತರಗತಿಯಿಂದ ಡಿಗ್ರಿವರೆಗೆ ಕೊಡವ ಪಠ್ಯಪುಸ್ತಕ ಮುದ್ರಣ ಆಗಿದ್ದು, ಕೊಡವ ಭಾಷೆಯಲ್ಲಿ ಭೋದಿಸುವ ಶಿಕ್ಷಕರ ಅಗತ್ಯವಿದೆ. ಹತ್ತು ಕೋಟಿ ರೂ.ವೆಚ್ಚದಲ್ಲಿ ಕೊಡವ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು, ಅಧ್ಯಯನ ಮಾಡುವವರಿಗೆ ಅವಕಾಶವಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ, ಮೊದಲು ನಾವು ಆತ್ಮವಿಶ್ವಾಸ ಬೆಳೆಸಿಕೊಂಡು ಬಳಿಕ ಮಕ್ಕಳಲ್ಲಿ ವಿಶ್ವಾಸ ತುಂಬಬೇಕು. ಮಕ್ಕಳು ಎಷ್ಟೇ ಶಿಕ್ಷಣ ಪಡೆದರು ಅವರಿಗೆ ಕೊಡವ ಪದ್ಧತಿ ಪರಂಪರೆ ಸಂಸ್ಕೃತಿ ತಿಳಿವಳಿಕೆ ನೀಡಬೇಕು ಎಂದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಕೊಡವ ಸಮಾಜದ ಬೆಳವಣಿಗೆಯೊಂದಿಗೆ ಕೊಡವ ಪೊಮ್ಮಕ್ಕಳ ಪರಿಷತ್ ಕೂಡ ಅತ್ಯುತ್ತಮ ರೀತಿಯಲ್ಲಿ ಕೈ ಜೋಡಿಸುತ್ತಿದೆ. ಪರಿಷತ್ತಿನ ಸೇವೆ ಕೊಡವ ಪುರುಷರಿಗೂ ದೊರಕುವಂತಾಗಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಮುಕ್ಕಾಟಿರ ಸೌಮ್ಯಾ, ಕೊಡವಡ ಮಾಲ್ ಮಟ ಎಂಬ ವಿಷಯದ ಕುರಿತು ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕೊಡವ ಸಮಾಜ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ, ಅರೆಯಡ ಸರಸು ಪೆಮ್ಮಯ್ಯ, ನಾಯಕಂಡ ಜೂಬಿ ತಿಮ್ಮಯ್ಯ, ಕಾಂಡಂಡ ಪ್ರತಿಜ ಅಚ್ಚಪ್ಪ ಇತರರು ಇದ್ದರು.