ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಿ

ಧಾರ್ಮಿಕ ಕಾರ್ಯಕ್ರಮವನ್ನು ಶಂಕರಾತ್ಮಾನಂದ ಸ್ವಾಮಿಜಿ  ಉದ್ಘಾಟಿಸಿದರು
ಧಾರ್ಮಿಕ ಕಾರ್ಯಕ್ರಮವನ್ನು ಶಂಕರಾತ್ಮಾನಂದ ಸ್ವಾಮಿಜಿ ಉದ್ಘಾಟಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ
  • ಶ್ರೀ ಕಾಳಿಕಾಂಬದೇವಿಯ ವಾರ್ಷಿಕ ಪೂಜಾ ಮಹೋತ್ಸವ
ಶನಿವಾರಸಂತೆ: ವಿಶ್ವಕರ್ಮ ವೈದ್ಯ ಪರಂಪರೆಯು ಭಾರತದ ಧಾರ್ಮಿಕ ಸಂಸ್ಕೃತಿಯ ರುವಾರಿ ಎಂದು ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ಆಯೋಜಿಸಿದ್ದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಕಾಳಿಕಾಂಬದೇವಿಯ 11ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ಉಪನಯನ ಮತ್ತು ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಬ್ರಾಹ್ಮಣ ಸಮುದಾಯ ಆರ್ಥಿಕ, ರಾಜಕೀಯ ಕೇತ್ರದಲ್ಲಿ ಹಿಂದುಳಿದಿದ್ದರೂ ಪಾರಂಪರಿಕವಾದ ಶಿಲ್ಪಶಾಸ್ತ್ರ ಮೂಲಕ ವಿಶ್ವಕ್ಕೆ ನೀಡಿರುವ ಕೊಡುಗೆಯಲ್ಲಿ ಮುಂದಿದೆ. ಆದರೆ ಸಂಘಟನೆ ಬಲವರ್ಧನೆಯ ಕೊರತೆಯಿಂದ ಸಮುದಾಯ ಸಮಾಜದಲ್ಲಿ ಗುರುತಿಸಿಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವ ಬ್ರಾಹ್ಮಣ ಮೂಲ ಪರಂಪರೆಯಾದ ಉಪನಯನ ಕಾರ್ಯವು ನಡೆಯುತ್ತಿರಬೇಕು. ಈ ಮೂಲಕ ಹಿರಿಯರು ಕಿರಿಯರಿಗೆ ಧಾರ್ಮಿಕ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿಕೊಡಬೇಕು. ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಸಂಸ್ಕಾರವನ್ನು ಹೇಳಿಕೊಡುವ ಮೂಲಕ ಇವುಗಳನ್ನು ಮುಂದಿನ ಪೀಳಿಗೆಯು ಮುಂದುವರೆಸುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಹಾಸನದ ಶ್ರೀ ಗಾಯತ್ರಿ ದೇವಿ ಪೌರೋಹಿತ್ಯ ಜ್ಯೋತಿಷ್ಯ ಮಂದಿರದ ಪ್ರಧಾನ ಪುರೋಹಿತ ಪ್ರದೀಪ ಶರ್ಮ ಮಾತನಾಡಿ, ವಿಶ್ವ ಬ್ರಾಹ್ಮಣ ಋಷಿ ಪರಂಪರೆಯಾಗಿದ್ದು, ಈ ಸಮಾಜದ ಉದ್ಧಾರಕ್ಕಾಗಿ ಉಪನಯನ ಕಾರ್ಯವು ಒಂದಾಗಿದೆ. ಈ ನಿಟ್ಟಿನಲ್ಲಿ ಉಪನಯನ ಧಾರ್ಮಿಕ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಹೆಬ್ಬಾಲೆ ಕರಕುಶಲ ಕರ್ಮಿ ಸಂಘದ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ವಿಶ್ವಕರ್ಮ ಸಮಾಜವು ಕಲೆ, ಶಿಲ್ಪಕಲೆ ಸೇರಿದಂತೆ ಕೃಷಿಕ ಸಮಾಜದವರಿಗೆ ರೈತ ಉಪಯೋಗಿ ಸಾಮಗ್ರಿ ತಯಾರಿಸುವ ಕಾರ್ಯವನ್ನು ಮಾಡುತ್ತಿದೆ. ಈ ಮೂಲಕ ನಮ್ಮ ಸಮಾಜವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಲ್ಲಿ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ಸಮಾಜದ ಅಧ್ಯಕ್ಷ ಬಿ.ಬಿ.ನಾಗರಾಜ್ ಮಾತನಾಡಿ, ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರೂ ಒಂದಾಗಿ ಸಹಕರಿಸುವಂತೆ ಮನವಿ ಮಾಡಿದರು.
ಪ್ರಧಾನ ಪುರೋಹಿತರಾದ ಪ್ರದೀಪ ಶರ್ಮ ಮತ್ತು ಮುಳ್ಳೂರು ಶರತ್ ನೇತೃತ್ವದಲ್ಲಿ ಕಾಳಿಕಾಂಬದೇವಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧ ಪೂಜೆ, ಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಉಪನಯನ ಮತ್ತು ಸಾಮೂಹಿಕ ಕುಂಕುಮಾರ್ಚನೆ ಕಾರ್ಯ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net