ಸುಂಟಿಕೊಪ್ಪ: ಮದ್ಯಪಾನ, ತಂಬಾಕು, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳ ಸೇವನೆಯಿಂದ ಜನರು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯುವಜನತೆ ದುಶ್ಚಟಗಳಿಂದ ದೂರವಿರುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ಪುರುಷೋತ್ತಮ್ ಹೇಳಿದರು.
ಚೆಟ್ಟಳ್ಳಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು ಬಿ ಸಿ ಟ್ರಸ್ಟ್ ಹಾಗೂ ಸುಂಟಿಕೊಪ್ಪ ವಲಯದ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ದುಶ್ಚಟಗಳ ದಾಸರಾದರೆ ನಮ್ಮ ಆರೋಗ್ಯ ಕುಟುಂಬ ಮತ್ತು ಸಮಾಜದಿಂದ ದೂರವಿರಿಸುತ್ತದೆ. ಅಲ್ಲದೆ ಮಾನವರ ದೇಹಕ್ಕೆ ಕ್ಯಾನ್ಸರ್, ಶ್ವಾಸಕೋಶ, ಲಿವರ್ ಸೇರಿದಂತೆ ಇತರ ಅಂಗಾಂಗಳನ್ನು ನಾಶಪಡಿಸುತ್ತದೆ. ದುಶ್ಚಟಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂದರು.
ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವನ್ನು ಪ್ರಭಾರ ಮುಖ್ಯಶಿಕ್ಷಕ ಸತ್ಯನಾರಾಯಣ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ರೇವತಿ ಮಾತನಾಡಿ, ಮಾದಕ ದ್ರವ್ಯ ಸೇವನೆ ಅಥವಾ ಮಾರಾಟ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಕಾಶಿ ವಹಿಸಿದ್ದರು. ಒಕ್ಕೂಟದ ಪದಾಧಿಕಾರಿಗಳಾದ ಆಶಾ, ಮಂಜುಳಾ, ಉದಯ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಸಂತೋಷ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಯು.ಸುನಂದಾ ಸ್ವಾಗತಿಸಿ, ಸೇವಾಪ್ರತಿನಿಧಿ ಚೆಲ್ವಿ ವಂದಿಸಿದರು.