ಕಾವೇರಿ ಕಾಲೇಜು ತಂಡ ಚಾಂಪಿಯ್

 ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ನಡೆದ ರಾಜ್ಯ ಮಟ್ಟದ 5 ಎ ಸೈಡ್ ರಿಂಕ್ ಹಾಕಿ ಪಂದ್ಯಾಟದಲ್ಲಿ ಚಾಂಪಿಯನ್ ಸ್ಥಾನ ಪಡೆದ ಕಾವೇರಿ ಕಾಲೇಜು ಗೋಣಿಕೊಪ್ಪಲು ತಂಡ.
ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ನಡೆದ ರಾಜ್ಯ ಮಟ್ಟದ 5 ಎ ಸೈಡ್ ರಿಂಕ್ ಹಾಕಿ ಪಂದ್ಯಾಟದಲ್ಲಿ ಚಾಂಪಿಯನ್ ಸ್ಥಾನ ಪಡೆದ ಕಾವೇರಿ ಕಾಲೇಜು ಗೋಣಿಕೊಪ್ಪಲು ತಂಡ.
Published on
ವಿರಾಜಪೇಟೆ: ವಿರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ 5ಎ ಸೈಡ್ ರಿಂಗ್ ಹಾಕಿ ಪಂದ್ಯಾಟದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಥಮ ಸ್ಥಾನ, ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜು ತಂಡ ದ್ವಿತೀಯ ಬಹುಮಾನ ಪಡೆದುಕೊಂಡವು.
ಒಟ್ಟು 20 ತಂಡಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ನಾಕೌಟ್ ಮಾದರಿಯ ಪಂದ್ಯ ನಡೆದು ಅಂತಿಮವಾಗಿ ಸೆಮಿ ಫೈನಲ್ ಹಂತಕ್ಕೆ ನಾಲ್ಕು ತಂಡಗಳು ಆಯ್ಕೆಯಾದವು. ಮೊದಲ ಸೆಮಿ ಫೈನಲ್ ಪಂದ್ಯಾಟ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜು ಬೆಂಗಳೂರು ಹಾಗೂ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು ತಂಡಗಳ ನಡುವೆ ನಡೆಯಿತು. ಸೇಂಟ್ ಜೋಸೆಫ್ಸ್ ಕಾಮರ್ಸ್ ತಂಡವು 6-1 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯ ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸಿಐಟಿ ಪೊನ್ನಂಪೇಟೆ ತಂಡಗಳ ನಡುವೆ ನಡೆಯಿತು. ಕಾವೇರಿ ಕಾಲೇಜು ಗೋಣಿಕೊಪ್ಪಲು 5 -2 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ತಲುಪಿತು.
ಫೈನಲ್ ಪಂದ್ಯವು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜುಗಳ ನಡುವೆ ನಡೆದು 4- 2 ಗೋಲುಗಳ ಅಂತರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಗೆದ್ದು ಪ್ರಥಮ ಸ್ಥಾನದೊಂದಿಗೆ 15 ಸಾವಿರ ರೂ.ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜು ತಂಡ ದ್ವಿತೀಯ ಸ್ಥಾನದೊಂದಿಗೆ 10 ಸಾವಿರ ರೂ.ನಗದು, ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಸಿಐಟಿ ಕಾಲೇಜು ಪೊನ್ನಂಪೇಟೆ 4-2 ಗೋಲಿನ ಅಂತರದಲ್ಲಿ ಸೇಂಟ್ ಜೋಸೆಫ್ ವಿವಿ ತಂಡವನ್ನು ಸೋಲಿಸಿ 3ನೇ ಸ್ಥಾನವನ್ನು ಪಡೆದು 5 ಸಾವಿರ ರೂ. ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಸೇಂಟ್ ಜೋಸೆಪ್ ವಿವಿ ತಂಡ 4ನೇ ಸ್ಥಾನ ಪಡೆದು 2,500 ರೂ. ನಗದು, ಟ್ರೋಫಿ ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ಶಿಸ್ತಿನ ತಂಡ ಬಹುಮಾನವನ್ನು ಸೆಂಟ್ ಜೋಸೆಫ್ ಮೈಸೂರು ತಂಡವು ಪಡೆಯಿತು. ಬೆಸ್ ಗೋಲ್ ಕೀಪರ್ ಪ್ರಶಸ್ತಿಯನ್ನು ಸಿಐಟಿ ಪೊನ್ನಂಪೇಟೆ ಕಾಲೇಜಿನ ಬೆವನ್ ಗಣಪತಿ, ಅತಿ ಹೆಚ್ಚು ಗೋಲ್ ದಾಖಲಿಸಿದ ಪ್ರಶಸ್ತಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ರಿವಿನ್, ಉತ್ತಮ ಆಟಗಾರ ಪ್ರಶಸ್ತಿಯನ್ನು ಮೈಸೂರಿನ ಸೇಪಿಯೆಂಟ್ ಕಾಲೇಜಿನ ಮುತ್ತಣ್ಣ, ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನ ಧನುಷ್ ಪಡೆದುಕೊಂಡರು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಸ್ಥಾನವಿದೆ. ಸೇನೆ ಹಾಗೂ ಹಾಕಿ ಪಂದ್ಯಾಟಕ್ಕೆ ಜಿಲ್ಲೆಯ ಕೊಡುಗೆ ಅಪಾರ. ನಮ್ಮ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಾಕಿ ಕ್ರೀಡೆ ಜಿಲ್ಲೆಯ ಅಸ್ಮಿತೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವಂತಾಗಲಿ. ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಹಾಕಿ ಆಟಗಾರರಿದ್ದು ತಾಲೂಕಿಗೆ ಒಂದು ಟರ್ಫ್ ಮೈದಾನ ಬೇಕಿದೆ ಎಂಬ ಬೇಡಿಕೆ ಕೇಳಿ ಬರುತ್ತಿದೆ. ಶೀಘ್ರ ಈ ವಿಚಾರ ಕುರಿತು ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಲ್ಡಾನಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಕಳೇರ ಕುಶಾಲಪ್ಪ, ನಾಪೋಕ್ಲು ಭಗವತಿ ಹಾಕಿ ಕ್ಲಬ್ ಸದಸ್ಯ ಅಚ್ಚಂದಿರ ಮಂದಣ್ಣ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net