ಸೋಮವಾರಪೇಟೆ: ಭಾರತ ಚುನಾವಣಾ ಆಯೋಗದ ನಿರ್ದೆಶನದ ಮೇರೆಗೆ ತಾಲೂಕು ಪಂಚಾಯಿತಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಗುರುವಾರ ಎಸ್‌ಐಆರ್ ಕುರಿತು ಜಾಗೃತಿ ಜಾಥಾ ನಡೆಯಿತು.
ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಾರಂಭಗೊಂಡ ಬೈಕ್ ಜಾಥಾಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಚಾಲನೆ ನೀಡಿದರು. ತಾಲೂಕು ವ್ಯಾಪ್ತಿಯ ಅಂಗವಿಕಲರ ಮನೆಗೆ ಭೇಟಿ ನೀಡಿ ಬಿಎಲ್‌ಒ ಸಮ್ಮುಖದಲ್ಲಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಲಾಯಿತು.
ತಾಲೂಕು ವ್ಯಾಪ್ತಿಯ ವಳಗುಂದ ಮತ್ತು ಹಿತ್ಲುಮಕ್ಕಿ ಹಾಡಿಗಳ ಮನೆಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಎಸ್‌ಐಆರ್ ಕುರಿತು ಮಾಹಿತಿ ನೀಡಲಾಯಿತು.
ಜಾಥಾದಲ್ಲಿ ಬಿಇಒ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.