ಸವಾಲುಗಳ ಮೆಟ್ಟಿನಿಂತು ಸಾಧನೆ ಮಾಡಿ

ಅ.ಭಾ.ವೀ ಕೊಡಗು ಮಹಿಳಾ ಘಟಕದಿಂದ ನಡೆದ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷೆ ಮುಕ್ತಾಂಬ ಉದ್ಘಾಟಿಸಿದರು.
ಅ.ಭಾ.ವೀ ಕೊಡಗು ಮಹಿಳಾ ಘಟಕದಿಂದ ನಡೆದ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷೆ ಮುಕ್ತಾಂಬ ಉದ್ಘಾಟಿಸಿದರು.
Published on
ಶನಿವಾರಸಂತೆ: ಇಂದಿನ ಸಮಾಜದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸಿ ಕಷ್ಟ ನಷ್ಟವನ್ನು ಮೆಟ್ಟಿನಿಲ್ಲುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಮುಕ್ತಾಂಬ ಅಭಿಪ್ರಾಯಪಟ್ಟರು.
ಶುಕ್ರವಾರ ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಮಹಿಳಾ ಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಕ್ಕಮಹಾದೇವಿ ಜಯಂತಿ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮ ಮಾರ್ಗದಲ್ಲಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಿರುವ ಮೂಲಕ ಡಾ.ಶ್ರೀ ಶಿವಕುಮಾರಸ್ವಾಮೀಜಿ ಲಕ್ಷಾಂತರ ಜನರಿಗೆ ದಾಸೋಹ, ಶಿಕ್ಷಣ, ಜ್ಞಾನ, ಆಧ್ಯಾತ್ಮಿಕ ಚಿಂತನೆಯನ್ನು ನೀಡಿದ್ದಾರೆ. ಶ್ರೀಗಳ ಶಿಷ್ಯ ಪರಂಪರೆ ವಿಶ್ವದಾದ್ಯಂತ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಅವರಲ್ಲಿದ್ದ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಅಕ್ಕಮಹಾದೇವಿ ಅವರು 12ನೇ ಶತಮಾನದ ಶಿವಶರಣೆಯಾಗಿದ್ದು, ಅವರ ವಚನ ಸಾಹಿತ್ಯದಲ್ಲಿ ಸಮಾಜ ಮತ್ತು ಮಹಿಳೆಯರನ್ನು ಜಾಗೃತಿಗೊಳಿಸುವ ಶಕ್ತಿ ಇದ್ದು ಇಂದಿನ ಮಹಿಳೆಯರಿಗೆ ಅಕ್ಕಮಹಾದೇವಿ ರಾಜ ಮನೆತನದವಳಾದರೂ ಅಂದು ಅವರು ಸಮಾಜದಲ್ಲಿ ತನ್ನ ವ್ಯಕ್ತಿತ್ವ ಪ್ರದರ್ಶನದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಈಗಲೂ ಅಕ್ಕಮಹಾದೇವಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿ ಮಾತನಾಡಿ, ಮಹಾಸಭಾಗೆ 122 ವರ್ಷಗಳ ಇತಿಹಾಸ ಇದ್ದು ಸಂಘಟನೆಯ ಬಲವರ್ಧನೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯವರು ವಚನವನ್ನು ಮಹಿಳೆಯರು ಕರಗತ ಮಾಡುವ ಮೂಲಕ ಸದೃಢ ಸಮಾಜ ಕಟ್ಟುವಂತೆ ಸಲಹೆ ನೀಡಿದರು.
ಕಲ್ಲುಮಠದ ಶ್ರೀ ಮಹಾಂತಸ್ವಾಮೀಜಿ ಮಾತನಾಡಿ, ಮಹಿಳೆಯರು ಪೂಜ್ಯ ಸ್ಥಾನದಲ್ಲಿರುವುದರಿಂದ ಮಹಿಳೆಯರಲ್ಲಿ ದೇವರನ್ನು ಕಾಣಲು ಸಾಧ್ಯವಾಗುತ್ತದೆ. ವೀರಶೈವ ಸಮಾಜ ಬಸವಣ್ಣ ಅವರ ಮಾರ್ಗದರ್ಶನ ಮೂಲಕ ವಿಶ್ವಕ್ಕೆ ದಾರಿ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಅ.ಭಾ.ವೀ.ಮಹಾಸಭಾ ಮಹಿಳಾ ಬೇಲೂರು ಘಟಕದ ಅಧ್ಯಕ್ಷೆ ಇಂಪನ, ಜಿಲ್ಲಾ ಅಧ್ಯಕ್ಷ ಶಿವಪ್ಪ ಮಾತನಾಡಿದರು. ಶ್ರೀ ಮಲ್ಲೇಶಸ್ವಾಮಿ, ಶ್ರೀ ಇಮ್ಮಡಿ ಶಿವಲಿಂಗಸ್ವಾಮಿ, ಶ್ರೀರುದ್ರಮುನಿ ಸ್ವಾಮಿ, ಅ.ಭಾ.ವೀ.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕ ಕರುಣ, ಪ್ರಮುಖರಾದ ಹಾಲಪ್ಪ, ಸುರೇಶ್, ನಂದೀಶ್, ವೀರೇಂದ್ರ, ಸುಮ ಸುದೀಪ್, ರಾಜೇಶ್ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net