ವಿರಾಜಪೇಟೆ :ವಿರಾಜಪೇಟೆ-ಕೇರಳ ಹೆದ್ದಾರಿ ಚೆಕ್‌ಪೋಸ್ಟ್ ಗೇಟ್ ಮೂಲಕ ಬರುವ ಲಾರಿ ಹಾಗೂ ಹುಲ್ಲು ತರುವ ವಾಹನಗಳಿಂದ ಹಫ್ತಾ ವಸೂಲಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪೆರುಂಬಾಡಿ ಚೆಕ್‌ಪೋಸ್ಟ್ ಬಳಿ ವಿರಾಜಪೇಟೆ-ಮಾಕುಟ್ಟ ರಸ್ತೆ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಆ.23ರಂದು ಲಾರಿಗಳಿಂದ ಹಣ ವಸೂಲಿಯಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿದಿನ ಲಕ್ಷ ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಹಣ ಎಲ್ಲಿಗೆ ಹೋಗುತ್ತಿದೆ. ಇದರಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಜತೆಗೆ ಈ ಕೂಡಲೇ ಹಫ್ತಾ ವಸೂಲಿ ತಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲ ಕಡೆಗಳಲ್ಲಿಯೂ ಹಸ್ತಾ ವಸೂಲಿ ನಡೆಯುತ್ತಿದೆ. ರಸ್ತೆಗಳು ಗುಂಡಿಮಯವಾಗಿದ್ದರೂ ಸರಿಪಡಿಸಲು ಸರ್ಕಾರ ಮುಂದಾಗಿಲ್ಲ ಎಂದು ದೂರಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಾಸೆ ನೀಡಿದರು.
ಮಂಡಲದ ಅಧ್ಯಕ್ಷ ಸುವಿನ್ ಗಣಪತಿ, ಕಿಲನ್ ಗಣಪತಿ, ಅಜಿತ್ ಕರುಂಬಯ್ಯ, ಮಾಚಿಮಂಡ ರವೀಂದ್ರ, ರೀನಾ ಪ್ರಕಾಶ್, ರವಿ ಕುಶಾಲಪ್ಪ, ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮತ್ತು ಶಶಿ ಸುಬ್ರಮಣಿ, ಬಿ.ಎಂ.ಗಣೇಶ್, ಬಿ.ವಿ.ಹೇಮಂತ್, ಯಮುನಾ ಚಂಗಪ್ಪ ಇತರರು ಇದ್ದರು.