ಪಳಂಗಡ, ಕುಲ್ಲೇಟಿರ ಚೆಪ್ಪುಡಿರ, ಪರದಂಡ ಸೆಮೀಸ್‌ಗೆ

ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ  ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಅಭಿಮಾನಿಗಳು.
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಅಭಿಮಾನಿಗಳು.
Published on
ದುಗ್ಗಳ ಸದಾನಂದ ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಪಳಂಗಡ, ಕುಲ್ಲೇಟಿರ ಚೆಪ್ಪುಡಿರ ಹಾಗೂ ಪರದಂಡ ತಂಡಗಳ ನಡುವೆ ಸೆಮಿಫೈನಲ್ ಸ್ಪರ್ಧೆಗಳು ನಡೆಯಲಿವೆ.
ಬುಧವಾರ ಪಳಂಗಡ ಮತ್ತು ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳಂಗಂಡ 3-2ರಿಂದ ಪೆಮ್ಮಂಡ ವಿರುದ್ಧ ಗೆಲುವು ಸಾಧಿಸಿತು. ಚೆಪ್ಪುಡಿರ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ 4-2ರಿಂದ ಕಂಬೀರಂಡ ವಿರುದ್ಧ ಗೆಲುವು ಸಾಧಿಸಿತು. ಕುಲ್ಲೇಟಿರ ಮತ್ತು ನೆಲ್ಲಮಕ್ಕಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್‌ನಲ್ಲಿ ಕುಲ್ಲೇಟಿರ 2-0 ಯಿಂದ ನೆಲ್ಲಮಕ್ಕಡ ವಿರುದ್ಧ ಜಯ ಸಾಧಿಸಿತು.
ಮಹಿಳಾ ಹಾಕಿ ಪಂದ್ಯದಲ್ಲಿ ಕಂಭೀರಂಡ 3-0 ಯಿಂದ ಅದೇಂಗಡ ವಿರುದ್ಧ ಗೆಲುವು ಸಾಧಿಸಿದರೆ, ಕೇಚೆಟ್ಟಿರ 4-0ಯಿಂದ ಶಿವಚಾಳಿಯಂಡ ವಿರುದ್ಧ ಗೆಲುವು ಸಾಧಿಸಿತು. ಗುರುವಾರ ಬೆಳಗ್ಗೆ 11.30ಕ್ಕೆ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿವೆ.
ಸೆಮಿ ಫೈನಲ್ ದಿನವಾದ ಗುರುವಾರ ರಾತ್ರಿ ಡಿಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಕ್ಕಬ್ಬೆಯಿಂದ ಹಾಕಿ ಮೈದಾನದವರೆಗೆ 10 ಕಿ.ಮೀ.ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿದೆ. ಕುಟುಂಬವಾರು ನಡೆಯುವ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರು ಭಾಗವಹಿಸಬಹುದಾಗಿದ್ದು ನಿಗದಿತ ಪಾಯಿಂಟ್‌ನಿಂದ ಇಬ್ಬರು ಜೋಡಿಯಾಗಿ ಓಡಬೇಕು. ಮೊದಲ ಹಂತ 3.5 ಕಿ.ಮೀ, ಎರಡನೇ ಹಂತ 3.5 ಕಿ.ಮೀ ಹಾಗೂ ಕೊನೆಯ ಹಂತ 3 ಕಿ.ಮೀ ಆಗಿರುತ್ತದೆ. ಒಂದು ಗುರಿಯನ್ನು ಇಬ್ಬರು ತಲುಪಿದ ಬಳಿಕವಷ್ಟೇ ಮತ್ತೆ ಮುಂದುವರಿಯಬಹುದಾಗಿದೆ.
ಮಹಿಳೆಯರ ಹಾಕಿ ಸೆಮಿಫೈನಲ್ಸ್ಗೆ ಮುಖ್ಯ ಅತಿಥಿಗಳಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಿವೃತ್ತ ಅಧಿಕಾರಿ ರಾಧಿಕಾ ಕರುಂಬಯ್ಯ, ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ.
ವಿಶೇಷತೆಗಳು:
ಚೇನಂಡ ಹಾಕಿ ಹಬ್ಬದ ಪಂದ್ಯಾವಳಿ ನಿರ್ದೇಶಕರಾಗಿ ನಾಯಕಂಡ ದೀಪು ಎರಡನೇ ಬಾರಿಗೆ ಕಾರ್ಯನಿರ್ವಹಿಸುತ್ತಿದ್ದು ಯೋಧ ಚೇಯಂಡ ಅಪಚ್ಚು ಅಂಪೈರ್ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೇನಂಡ ಹಾಕಿ ಹಬ್ಬದಲ್ಲಿ 33 ತೀರ್ಪುಗಾರರಿದ್ದು, ಇವರಲ್ಲಿ 3 ಮಹಿಳೆಯರು ಹಾಗೂ 30 ಪುರುಷರ ತೀರ್ಪುಗಾರರಿದ್ದಾರೆ. ಚೇನಂಡ ಹಾಕಿ ಹಬ್ಬವನ್ನು ರಾಷ್ಟ್ರೀಯ ತೀರ್ಪುಗಾರರು ಹಾಗೂ ಅನುಭವಸ್ಥ ಹಿರಿಯ ಆಟಗಾರರು ನಡೆಸಲು ನೆರವು ನೀಡುತ್ತಾ ಬರುತ್ತಿದ್ದಾರೆ. ನಾಯಕಂಡ ದೀಪಕ್ ಚಂಗಪ್ಪ, ಚೆಯ್ಯಂಡ ಲವ ಅಪ್ಪಚ್ಚು, ಚೆಂದಪಂಡ ಆಕಾಶ್ ಚಂಗಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಮೂಕಚಂಡ ನಿರನ್ ನಾಚಪ್ಪ, ಬಲ್ಲಚಂಡ ನಾಣಯ್ಯ, ಅಪ್ಪಚೊಟ್ಟೋಳಂಡ ಅಯ್ಯಪ್ಪ, ಕೊಂಡೀರ ಕೀರ್ತಿ, ಬೊಟ್ಟಂಗಡ ಕೌಶಿಕ್, ಪಟ್ರಪಂಡ ಸಚಿನ್ ಮಂದಣ್ಣ, ಅಣ್ಣಡಿಯಂಡ ಪೊನ್ನಣ್ಣ, ಮೇರಿಯಂಡ ರಾಯ್ ಅಯ್ಯಣ್ಣ, ಬೊಳಿಯಡಿರ ಸುಬ್ಬಯ್ಯ, ಕೊಳುವಂಡ ಚಂಗಪ್ಪ, ಕಲ್ಮಾದಂಡ ಸೋಮಣ್ಣ, ಕಾಳಿಮಾಡ ಕಿರಣ್, ಬಲ್ಲಚಂಡ ಸಜನ್ ಗಣಪತಿ, ಅಯ್ಯನೆರವಂಡ ನಾಚಪ್ಪ, ತಿರೊಡಿರ ನಿರುಪ್ ನಾಣಯ್ಯ, ಕುಂಞಯಂಡ ರಿವಿನ್, ಚೇರ್ಮಾದಂಡ ವೀಕ್ಷಿತ, ಚೆಯ್ಯಂಡ ಭಾಗ್ಯಶ್ರೀ, ಪುದಿಯಒಕ್ಕಡ ಅಭಿನ್, ಅರೆಯಡ ಗಿರೀಶ್, ಚೌರೀರ ದೇಚಮ್ಮ, ಮಾಲೆಟ್ಟಿರ ಕಾಳಪ್ಪ, ಕೋಡಿಮಣಿಯಂಡ ಹರ್ಷ, ಕುಮ್ಮಂಡ ಸೋನು, ಕೈಪಟ್ಟೀರ ಬೋಪಣ್ಣ, ಕಂಬೆಯಂಡ ಲಿಖಿತ್ ತಿಮ್ಮಯ್ಯ, ಮಳವಂಡ ತಕ್ಷಕ್ ಬಿದ್ದಪ್ಪ ಹಾಗೂ ನಾಪಂಡ ಕವನ್ ಭಾಗವಹಿಸಿದ್ದರು.
ಅಂಕಿ ಅಂಶಗಳು
ಈವರೆಗಿನ ಗೋಲುಗಳು: 1472
ಪೆನಾಲ್ಟಿ ಕಾರ್ನರ್ ಗೋಲುಗಳು: 2248
ಪೆನಾಲ್ಟಿ ಶೂಟ್‌ಔಟ್ ಗೋಲುಗಳು: 21
ಟೈ ಬ್ರೇಕರ್: 56
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net