ಹೊನ್ನೇರು ಬೈಲು ಪ್ರದೇಶದಲ್ಲಿ ಗುಂಡಿ ತೆಗೆಸಿದ್ದಕ್ಕೆ ಆಕ್ಷೇಪ

 ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಬಿದಿರು ನೆಡುವ ಕಾರ್ಯಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಸುರೇಶ್, ದಿನೇಶ್, ಪ್ರಕಾಶ್ ಇದ್ದರು.
ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಬಿದಿರು ನೆಡುವ ಕಾರ್ಯಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಸುರೇಶ್, ದಿನೇಶ್, ಪ್ರಕಾಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ನಡೆಗೆ ಕೂತಿ ಗ್ರಾಮಸ್ಥರ ಆಕ್ರೋಶ
  • ಬಿದಿರು ನೆಡುವ ಕಾರ್ಯಕ್ಕೆ ಅಡ್ಡಿ
ಸೋಮವಾರಪೇಟೆ: ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಗುರುವಾರ ಅರಣ್ಯ ಇಲಾಖೆ ಹಿಟಾಚಿ ಯಂತ್ರದ ಮೂಲಕ ಗುಂಡಿ ತೆಗೆಸಿ ಬಿದಿರು ನೆಡುವ ಕಾರ್ಯಕ್ಕೆ ಮುಂದಾದ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದರು.
ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ, ಹೊನ್ನೇರು ಬೈಲು ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ತಿಳಿಸಿ ಗುಂಡಿ ತೆಗೆದು ಬಿದಿರು ನೆಡುವ ಕಾರ್ಯ ಆರಂಭಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆದು, ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಕೆಲಸ ಮುಂದುವರಿಸಬಾರದು ಎಂದು ಪಟ್ಟು ಹಿಡಿದರು.
ಬಳಿಕ ಸ್ಥಳಕ್ಕೆ ಡಿಎಫ್‌ಒ ಅಭಿಷೇಕ್, ಎಸಿಎಫ್ ನವೀನ್, ಸೋಮವಾರಪೇಟೆ ಆರ್‌ಎಫ್‌ಒ ಮಲ್ಲೇಶ್, ಡಿಆರ್‌ಎಫ್‌ಒ ಕಿರಣ್ ಹಾಗೂ ಸಿಬ್ಬಂದಿ ಆಗಮಿಸಿದ ವೇಳೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್ ಮಾತನಾಡಿ, ಕೂತಿ ಗ್ರಾಮದಲ್ಲಿ ಸೆಕ್ಷನ್-4 ಅಧಿಸೂಚನೆ ಇಲ್ಲ. ಇದ್ದಿದ್ದರೆ ಗ್ರಾಮಸ್ಥರಿಗೆ ನೋಟಿಸ್ ನೀಡಬೇಕಿತ್ತು. ಸಿ ಆ್ಯಂಡ್ ಡಿ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರ ನೇಮಿಸಿರುವ ವಿಶೇಷ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವವರೆಗೆ ರೈತರಿಗೆ ಯಾವುದೇ ತೊಂದರೆ ನೀಡಬಾರದು. ಈಗಾಗಲೇ ಗ್ರಾಮಸ್ಥರು ನಮೂನೆ 50 ಮತ್ತು 53ರಡಿ ಅರ್ಜಿ ಸಲ್ಲಿಸಿದ್ದಾರೆ. ಮೊದಲು ಜಂಟಿ ಸರ್ವೇ ನಡೆಸಿ ನಂತರವೇ ಮೀಸಲು ಅರಣ್ಯ ಎಲ್ಲಿದೆ ಎಂದು ತಿಳಿದುಕೊಂಡು ಬಿದಿರುಗಳನ್ನು ನೆಡುವ ಕೆಲಸ ಮಾಡಬೇಕು ಎಂದು ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಗ್ರಾಮ ಸಮಿತಿಗೆ ಮಾಹಿತಿ ನೀಡದೆ ಯಂತ್ರಗಳ ಮೂಲಕ ಕಾಮಗಾರಿ ಆರಂಭಿಸಿರುವುದು ಖಂಡನೀಯ. ಗಿಡ ನೆಡುವುದಕ್ಕೆ ಆದೇಶದ ಪ್ರತಿಯನ್ನೂ ಅಧಿಕಾರಿಗಳು ನೀಡಿಲ್ಲ ಎಂದು ಆರೋಪಿಸಿದರು. ಕಾಡುಪ್ರಾಣಿಗಳ ಸಮಸ್ಯೆ ವೇಳೆ ಸ್ಪಂದಿಸದ ಅರಣ್ಯ ಇಲಾಖೆ ಈಗ ಏಕಾಏಕಿ ಖಾಲಿ ಜಾಗದಲ್ಲಿ ಬಿದಿರು ನೆಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಫ್ ಅಭಿಷೇಕ್, ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿ, ಅಧಿಕಾರಿಗಳು ಸ್ಥಳದಿಂದ ತೆರಳಿದರು. ಗ್ರಾಮಸ್ಥರಾದ ಪ್ರಕಾಶ್, ಜಿತೇಂದ್ರ, ದಿನೇಶ್, ದರ್ಶನ್, ವಿಜಯ್, ಲೋಹಿತ್, ವಿನೋದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net