ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಯೋಜನಾಧಿಕಾರಿ ಪುರುಷೋತ್ತಮ್, ಪುಷ್ಪಾ, ಸಂತೋಷ್, ಮಾಲಿನಿ ಇತರರು ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವು ಬೆಟ್ಟಗೇರಿಯ ಲಕ್ಷ್ಮಿ ದೇವಿ ಸ್ವಸಹಾಯ ಸಂಘದಲ್ಲಿ ನಡೆಸಲಾಯಿತು.
ಸಮಾರಂಭವನ್ನು ಮಡಿಕೇರಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಸದಸ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡಲಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಮೂಲಕ ಸದಸ್ಯರು ವೈಯಕ್ತಿಕ ಅಭಿವೃದ್ಧಿಯನ್ನು ಕಂಡುಕೊಳ್ಳ ಬಹುದಾಗಿದೆ. ಇದರಿಂದ ಕುಟುಂಬ ವರ್ಗವು ಅಭಿವೃದ್ಧಿ ಕಂಡುಕೊಳ್ಳುತ್ತಿರುವುದು ಆಶಾದಾಯಕ ವಿಚಾರವಾಗಿದೆ.
ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು.
ಇದೇ ವೇಳೆ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಕೇಂದ್ರದ ಸದಸ್ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪುಷ್ಪ, ವಲಯದ ಮೇಲ್ವಿಚಾರಕ ಸಂತೋಷ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಾಲಿನಿ, ಸೇವಾ ಪ್ರತಿನಿಧಿ ಚಿತ್ರಾ ಸುರೇಶ್, ಸದಸ್ಯರಾದ ರಾಜೇಶ್ ಹಾಗೂ ಕೇಂದ್ರದ ಸದಸ್ಯರು ಊರಿನ ಎಲ್ಲ ಸದಸ್ಯರು ಭಾಗವಹಿಸಿದ್ದರು.