ಕುಶಾಲನಗರ: ಆರ್ಯವೈಶ್ಯ ಕುಲದೇವತೆ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿ ಜಯಂತಿ ಅಂಗವಾಗಿ ವಾಸವಿ ಮಾತೆಗೆ 13 ಜೋಡಿ ದಂಪತಿ ಸೋಮವಾರ ಪುಷ್ಪಾರ್ಚನೆ ನೆರವೇರಿಸಿದರು.
ಕುಶಾಲನಗರದ ರಥಬೀದಿಯಲ್ಲಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ದೀಕ್ಷಾ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕುಶಾಲನಗರದ ಎಲ್ಲ ಆರ್ಯವೈಶ್ಯ ಕುಲಭಾಂದವರು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. 7 ದಿನಗಳು ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಅದೇ ರೀತಿ ನಮ್ಮ ಸಮಿತಿಯಿಂದ ದೇವಿಗೆ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಆರ್ಯವೈಶ್ಯ ಮಂಡಳಿ ಮತ್ತು ಇತರೆ ಸಂಘಗಳ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.
ವಾಸವಿ ದೀಕ್ಷಾ ಸಮಿತಿ ಕಾರ್ಯದರ್ಶಿ ಬಿ.ಎಲ್.ಸತೀಶ್, ಖಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್.ರಮೇಶ್, ವಿ.ಆರ್. ಮಂಜುನಾಥ್, ಎಸ್.ಎಂ.ಸತೀಶ್, ಬಿ.ಪಿ.ಕೃಷ್ಣಮೂರ್ತಿ, ಕೆ.ಎಸ್.ನಾಗೇಶ್, ನಾಗಮಣಿ, ಸಮುದಾಯದವರು ಪಾಲ್ಗೊಂಡಿದ್ದರು.