ಕರ್ತವ್ಯದ ಅವಧಿಯಲ್ಲಿ ಆಸ್ಪತ್ರೆಯಲ್ಲಿರಬೇಕು

ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿಯಲ್ಲಿ ಶಾಸಕ ಡಾ.ಮಂತರ್ ಗೌಡ, ಕೃಷ್ಣಮೂರ್ತಿ, ಪರಮೇಶ ಕುಮಾರ್ ಇದ್ದರು.
ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿಯಲ್ಲಿ ಶಾಸಕ ಡಾ.ಮಂತರ್ ಗೌಡ, ಕೃಷ್ಣಮೂರ್ತಿ, ಪರಮೇಶ ಕುಮಾರ್ ಇದ್ದರು.
Published on
ಸೋಮವಾರಪೇಟೆ: ಪ್ರತಿಯೊಬ್ಬ ವೈದ್ಯರು ಸರ್ಕಾರದ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕರ್ತವ್ಯದ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಇರಬೇಕು ಎಂದು ಶಾಸಕ ಡಾ.ಮಂತರ್‌ಗೌಡ ವೈದ್ಯರಿಗೆ ಸೂಚನೆ ನೀಡಿದರು.
ತಾಲೂಕು ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮ ಪ್ರಕಾರ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ರೀತಿ ಎಚ್ಚರಿಕೆ ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ.ಜಮೀರ್ ಅವರಿಗೆ ಸೂಚನೆ ನೀಡಿದರು.
ಕಾಯಿಲೆಗೆ ರಜೆ ಇರುವುದಿಲ್ಲ. ರಾಷ್ಟ್ರೀಯ ಹಬ್ಬಗಳ ದಿನದಂದು ವೈದ್ಯರು ಕೆಲಸ ಮಾಡಬೇಕು. ಪರ್ಯಾಯವಾಗಿ ರಾತ್ರಿ ಮತ್ತು ಹಗಲು ಪಾಳಿಯಲ್ಲೂ ಕಾರ್ಯನಿರ್ವಹಿಸಬೇಕು ಎಂದರು.
ಶಸ್ತ್ರಚಿಕಿತ್ಸಾ ವಿಭಾಗವನ್ನು ಮಾಡ್ಯೂಲರ್ ಆಪರೇಷನ್ ಥೀಯೇಟರ್ ಮಾಡುವ ಕುರಿತು ಎರಡು ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದರೂ ಯಾವುದೇ ಪತ್ರ ವ್ಯವಹಾರವನ್ನು ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಶೀಘ್ರದಲ್ಲೇ ಕಾರ್ಯೋನ್ಮುಖವಾಗಬೇಕು ಎಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.
ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾಗಿರುವ ವಾಷಿಂಗ್ ಮಷಿನ್ ಮತ್ತು ಡ್ರೈಯರ್ ಖರೀದಿಸಲು ಹಿಂದಿನ ವರ್ಷ ಸೂಚನೆ ನೀಡಿದ್ದರೂ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಮಳೆಗಾಲದಲ್ಲಿ ರೋಗಿಗಳಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕಾಗಿದೆ. ರೋಗಿಗಳಿಗೆ ಗುಣಮಟ್ಟದ ಆಹಾರ ಒದಗಿಸಬೇಕು. ಯಾವುದೇ ದೂರುಗಳು ಬಂದರೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಮಕ್ಕಳಿಗೆ ಚಿಕಿತ್ಸೆ ನೀಡಲು ಬೇರೆಯೇ ಕೊಠಡಿ ಬಳಸಬೇಕು ಎಂದರು.
ಆಸ್ಪತ್ರೆಗೆ ನೀಡಲಾದ ಒಂದು ಆಂಬುಲೆನ್ಸ್ ವಾಹನದ ಎಫ್‌ಸಿ ಆಗದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ನೀರಿನ ಲಭ್ಯತೆಯ ಪ್ರಮಾಣ ಕಡಿಮೆ ಇರುವುದರಿಂದ ಕೊಳವೆಬಾವಿ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಕೆಲಸವನ್ನು ತುರ್ತಾಗಿ ಮಾಡಿಸಬೇಕು. ಆಸ್ಪತ್ರೆಗೆ ಭದ್ರತಾ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಪೊಲೀಸ್ ಇಲಾಖೆ ಮೂಲಕ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕಳುಹಿಸಿಕೊಡಬೇಕೆಂದು ವೈದ್ಯಾಧಿಕಾರಿ ಡಾ.ಜಮೀರ್ ಮನವಿ ಮಾಡಿದರು.
ಶವಾಗಾರದ ಕೊಠಡಿಗೆ ಮೂಲಸೌಕರ್ಯ ಹಾಗೂ ಶವ ಪರೀಕ್ಷೆ ಸಂದರ್ಭ ಬೇಕಾಗಿರುವ ಅತ್ಯಾಧುನಿಕ ಉಪಕರಣಗಳ ಖರೀದಿ ಮಾಡಬೇಕು. ಪ್ರಸ್ತುತ 6 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಅನಸ್ತೇಷಿಯಾ, ಮಕ್ಕಳ ತಜ್ಞರು, ನೇತ್ರ ತಜ್ಞರು, ರೇಡಿಯಾಲಜಿಸ್ಟ್ ಹಾಗೂ ತುರ್ತು ವೈದ್ಯಾಧಿಕಾರಿಗಳ ಸೇವೆ ಅಗತ್ಯವಿದೆ. ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತಂದು ವೈದ್ಯರ ನೇಮಕ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಒಳರೋಗಿಗಳಿಗೆ ಆಹಾರ ವಿತರಿಸಿದ ಒಂದೂವರೆ ಲಕ್ಷ ರೂ. ಇನ್ನೂ ಪಾವತಿಯಾಗಿಲ್ಲ ಎಂದು ಪಟ್ಟಣದ ಹೋಟೆಲ್ ಮಾಲೀಕರೊಬ್ಬರು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಇದರ ಕುರಿತು ಸಮಸ್ಯೆ ಪರಿಹರಿಸುವಂತೆ ವೈದ್ಯಾಧಿಕಾರಿಗೆ ಶಾಸಕರು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ಕುಮಾರ್, ತಹಸೀಲ್ದಾರ್ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಇಂದೂಧರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಸೆಸ್ಕ್ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗಳು, ವೈದ್ಯರು, ಆಸ್ಪತ್ರೆ ಸಿಬ್ಬಂದಿ ಇದ್ದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಮಂಜುಳಾ ಆಸ್ಪತ್ರೆಯ ಕೆಲ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net