ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ರಾಜಶೇಖರ್ ಗೌಡ, ಶಿವಣ್ಣ, ಫ್ರಾನ್ಸಿಸ್ ಡಿಸೋಜ, ಚಂದ್ರು, ಜಯಶ್ರೀ ಮುರುಗೇಶ್, ಸಜಿಲ್ ಕುಮಾರ್, ಮಣಿಕಂಠ, ಹರೀಶ್, ನಂದ, ಬಾಲಕೃಷ್ಣ, ನಂಜಪ್ಪ, ರಮೇಶ್, ಕಾರ್ತಿಕ್, ವಸಂತಿ, ಸಂಧ್ಯಾ ಇದ್ದರು.
ಶನಿವಾರಸಂತೆ: ಸರ್ಕಾರಿ ಶಾಲೆಗಳನ್ನು ಉಳಿಸುವ, ಮೂಲಸೌಕರ್ಯಗಳನ್ನು ಉತ್ತಮಪಡಿಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ಹೇಳಿದರು.
ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘಟನೆ ವತಿಯಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಸಾಮಗ್ರಿಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ವಾತಾವರಣವನ್ನು ಉತ್ತಮವಾಗಿಟ್ಟುಕೊಂಡಿರುವ ಇಲ್ಲಿನ ಶಿಕ್ಷಕರ ಸೇವೆ ಅನನ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರವೇ ಕುಶಾಲನಗರ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೂ ಸಹ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಶ್ರದ್ಧೆಯಿಂದ ಓದಿ ಶಾಲೆಗೆ ಕೀರ್ತಿ ತರಬೇಕು ಎಂದರು.
ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಪುಸ್ತಕಗಳನ್ನು ಕೊಡುಗೆ ನೀಡಿದ ದಾನಿಗಳಾದ ನಳಿನಿ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಸಲಹೆಗಾರ ಸಜಿಲ್ ಕುಮಾರ್, ಕಾರ್ಮಿಕ ಘಟಕದ ಉಪಾಧ್ಯಕ್ಷ ಮಣಿಕಂಠ, ನೆಲ್ಲಿಹುದಿಕೇರಿ ಘಟಕದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ನಂದ, ಕಾರ್ಯಕರ್ತರಾದ ಬಾಲಕೃಷ್ಣ, ನಂಜಪ್ಪ, ರಮೇಶ್, ಕಾರ್ತಿಕ್, ಮುಖ್ಯ ಶಿಕ್ಷಕಿ ವಸಂತಿ, ಶಿಕ್ಷಕಿ ಸಂಧ್ಯಾ ಇದ್ದರು.