ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಕೀಲ ನಿಧಿ ಲಿಂಗಪ್ಪ ಪುಷ್ಪಾ ನಮನ ಸಲ್ಲಿಸಿದರು. ಈರಪ್ಪ, ದೀಪಕ್, ಬೋಜೇಗೌಡ, ಬಾಲಕೃಷ್ಣ ಇದ್ದರು.
ಸೋಮವಾರಪೇಟೆ : ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಪತ್ರಿಕಾ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲ ನಿಧಿ ಲಿಂಗಪ್ಪ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ 545ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಪ್ರಪಂಚದ ಅತಿ ಎತ್ತರದ ಹಾಗೂ ಮೈನಸ್ 40 ಡಿಗ್ರಿ ತಾಪಮಾನದ ಪ್ರದೇಶದಲ್ಲಿ ಭಾರತೀಯ ಯೋಧರು ಅಪ್ರತಿಮ ಶೌರ್ಯ ಪ್ರದರ್ಶಿಸಿ ವಿಜಯ ಸಾಧಿಸಿದ್ದಾರೆ ಎಂದರು.
ದೇಶಪ್ರೇಮ ಬೆಳೆಸಲು ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಾತಿ-ಧರ್ಮಗಳ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ರಾಷ್ಟ್ರೀಯ ಏಕತೆ ಬಲಪಡಿಸಬೇಕಿದೆ. ಯುವಜನರಲ್ಲಿ ದೇಶಭಕ್ತಿಯ ಮನೋಭಾವ ಬೆಳೆಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಜೈ ಜವಾನ್ ಮಾಜಿ ಯೋಧರ ಸಂಘದ ಅಧ್ಯಕ್ಷ ಈರಪ್ಪ, ಹಿಂದೂ ಜಾಗರಣ ವೇದಿಕೆಯ ಬೋಜೇಗೌಡ, ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ಕೆ.ಎನ್. ದೀಪಕ್, ಮೋಟಾರು ಮಾಲೀಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.