ಗುಂಡ್ಲುಪೇಟೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಎಂ.ಎಸ್.ತನ್ಮಯಿ, ಮಹದೇವಪ್ರಸಾದ್, ಎಲ್.ಸುರೇಶ್ ಇತರರು ಇದ್ದರು.
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಸಿಎಂಎಸ್ ಕಲಾಮಂದಿರದಿಂದ ಬೈಕ್ ರ‌್ಯಾಲಿ ಮೂಲಕ ಆಗಮಿಸಿದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ, ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಿರುದ್ಧ ಧಿಕ್ಕಾರ ಕೂಗಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ರೈತರು ಅರಿಶಿಣ, ಬೆಳ್ಳುಳ್ಳಿ, ಬಾಳೆ ಬೆಳೆಯಲು ಲಕ್ಷಾಂತರ ರೂ. ಬಂಡವಾಳ ಹಾಕಿದ್ದು, ಬೆಳೆ ಉಳಿಸಿಕೊಳ್ಳಲು ನೀರಿನ ಕೊರತೆ ಎದುರಾಗಿದೆ. ಹೊಸ ಕೊಳವೆ ಬಾವಿ ಕೊರೆಸುವುದು, ಟ್ಯಾಂಕರ್ ಮೂಲಕ ನೀರು ಸಾಗಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಬರದಿಂದ ಖುಷ್ಕಿ ಬೆಳೆ ನಾಶದ ಕಾರಣ ಒಣಮೇವು ಇಲ್ಲವಾಗಿದ್ದು ಜಾನುವಾರು ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರೂ ಮೇವಿನ ಸರಬರಾಜಿಗೆ ಏನು ವ್ಯವಸ್ಥೆ ಮಾಡಿಲ್ಲ. ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಒಂದು ಬೋರ್‌ವೆಲ್ ಹಾಕಿಸಿಲ್ಲ. ಗೋಶಾಲೆ ಆರಂಭಿಸಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ. ತಮಿಳುನಾಡಿಗೆ ನೀರು ಹೋಗುತ್ತಿದ್ದರೂ ನಮ್ಮ ಕೆರೆಗಳಿಗೆ ನೀರು ಬಿಡುತ್ತಿಲ್ಲ. ಮೂರು ತಿಂಗಳಾದರೂ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೆಲಸ ಆರಂಭ ಆಗಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೆ. ಸ್ಥಳಕ್ಕೆ ನೀರಾವರಿ ಅಧಿಕಾರಿಗಳ ಬರದಂತೆ ಶಾಸಕರು ಒತ್ತಡ ಹಾಕಿದ್ದಾರೆ. ಹಾಗಾದರೆ ರೈತರ ವಿಷಯದಲ್ಲಿ ನಿಮ್ಮ ಸ್ಪಂದನೆ ಏನು ಎಂದು ಪ್ರಶ್ನಿಸಿದರು.
ಕೆರೆಗಳಿಗೆ ನೀರು ತುಂಬಿಸಲು ವಿಫಲರಾಗಿರುವ ಜತೆಗೆ ಅಭಿವೃದ್ಧಿಯಲ್ಲಿ ತಾಲೂಕು 10 ವರ್ಷಗಳಷ್ಟು ಹಿಂದೆ ಹೋಗಿದೆ. ಕೇರಳಕ್ಕೆ ನಿತ್ಯ 300 ಟಿಪ್ಪರ್ ಖನಿಜ ಸಂಪತ್ತಿನ ಲೂಟಿ, ಪಡಿತರ ಅಕ್ಕಿ, ಗಾಂಜಾ ಎಗ್ಗಿಲ್ಲದೇ ಸಾಗಣೆ ಆಗುತ್ತಿದೆ. ಪಂಪ್‌ಸೆಟ್‌ಗಳಿಗೆ ಕರೆಂಟ್ ಕೊಡುತ್ತಿಲ್ಲ. ಟಿಸಿ ಪಡೆದುಕೊಳ್ಳಲು ಒಂದು ತಿಂಗಳು ಬೇಕು. ಈ ಎಲ್ಲ ಕಾರಣಗಳಿಗೆ ಬರ ವೀಕ್ಷಣೆ ವೇಳೆ ರೈತರು ನಿಮಗೆ ಬೈದು ಛೀಮಾರಿ ಹಾಕಿದ್ದಾರೆ. ಕೆರೆಗಳಿಗೆ ನೀರು ತುಂಬಿಸದೆ ರೈತರು ಏನು ಮಾಡಲು ಸಾಧ್ಯವಾಗಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ಯೆ ಪರಿಹಾರಕ್ಕೆ ಕಾವೇರಿ ನೀರಾವರಿ ನಿಗಮದ ಇಇ, ಎಇಇ ಕರೆಸಿ ಸೋಮವಾರ ಮಧ್ಯಾಹ್ನ ಒಂದು ಸಭೆ ಆಯೋಜಿಸಲು ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರನ್ನು ಸಿ.ಎಸ್.ನಿರಂಜನ್ ಕುಮಾರ್ ಒತ್ತಾಯಿಸಿದರು.
ತಹಸೀಲ್ದಾರ್ ಪ್ರತಿಭಟನಾಕಾರರ ಮನವಿ ಆಲಿಸಿದರು. ವಿಷಯವನ್ನು ಮೇಲಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ವರದಿ ಮಾಡುತ್ತೇನೆ ಎಂದು ಭರವಸೆ ನೀಡಿದರು.