ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿ ವಿರಾಜಪೇಟೆಯಲ್ಲಿ ಪೋಸ್ಟರ್ ಬಿಡುಗಡೆ, ಸಹಿ ಸಂಗ್ರಹ ಅಭಿಯಾನ ನಡೆಯಿತು. ಪ್ರೇಮಾ, ಸೀತೆ, ಸುಮತಿ, ನಂದಿನಿ, ಬಿಂದು, ಮಂಗಳಾ ಇದ್ದರು.
ವಿರಾಜಪೇಟೆ : ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಜನಗಣತಿ ಹಾಗೂ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ, ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಬೇಕು.
ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಆಧಾರದ ಮೇಲೆಯೇ ಮುಂದಿನ ಚುನಾವಣೆಯಿಂದ ಶೇ.33ರ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ವಿರಾಜಪೇಟೆಯಲ್ಲಿ ಪೋಸ್ಟರ್ ಬಿಡುಗಡೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಿತು.
ವಿರಾಜಪೇಟೆಯಲ್ಲಿ ಸಂಘಟನೆಯ ಕಚೇರಿಯಲ್ಲಿ ಮಂಗಳವಾರ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ ಮುಖಂಡರು, ಬಳಿಕ ಸಾರ್ವಜನಿಕರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಂದ ಸಹಿ ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಇಂದಿಗೂ ಕಡಿಮೆಯಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಶೇ.33 ಮೀಸಲಾತಿಯನ್ನು ಮುಂದಿನ ಚುನಾವಣೆಯಿಂದಲೇ ಜಾರಿಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ 185 ರಾಷ್ಟ್ರಗಳ ಪೈಕಿ ಭಾರತವು 151ನೇ ಸ್ಥಾನದಲ್ಲಿರುವುದು ನಾಚಿಕೆಗೇಡಿನ ಸಂಗತಿ. ಹಲವು ದಶಕಗಳಿಂದ ಭಾರತೀಯ ಮಹಿಳೆಯರು ತಮ್ಮ ನ್ಯಾಯಸಮ್ಮತ ರಾಜಕೀಯ ಅವಕಾಶ ಮತ್ತು ಅಧಿಕಾರದಿಂದ ವಂಚಿತರಾಗಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಈ ವ್ಯವಸ್ಥಿತ ಅನ್ಯಾಯಕ್ಕೆ ಈಗಲೇ ಅಂತ್ಯ ಹಾಡಬೇಕು ಎಂದರು.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಸಮಾನ ರಾಜಕೀಯ ಪ್ರತಿನಿಧಿತ್ವಕ್ಕಾಗಿ ಮಹಿಳೆಯರು ಬಹಳ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಈ ಐತಿಹಾಸಿಕ ಭರವಸೆಯನ್ನು ಕಾರ್ಯರೂಪಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಜನವಾದಿ ಸಂಘಟನೆಯ ಸದಸ್ಯೆ ಪ್ರೇಮಾ, ಸೀತೆ, ಸುಮತಿ, ನಂದಿನಿ, ಬಿಂದು, ಮಂಗಳಾ, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಎ.ಸಿ.ಸಾಬು, ಡಿವೈಎಫ್‌ಐ ಸಂಘಟನೆಯ ಮುಖಂಡರಾದ ಸಾಧಿಕ್, ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ಇತರರು ಇದ್ದರು.