ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

ಕಾಡಾನೆ ದಾಳಿಗೆ ಬಲಿಯಾದ ಘಟನಾ ಸ್ಥಳಕ್ಕೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಭೇಟಿ ನೀಡಿದರು.
ಕಾಡಾನೆ ದಾಳಿಗೆ ಬಲಿಯಾದ ಘಟನಾ ಸ್ಥಳಕ್ಕೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಭೇಟಿ ನೀಡಿದರು.
Published on
ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿ ವ್ಯಾಪ್ತಿಯ ಕಾಫಿ ತೋಟದಲ್ಲಿ ಗುರುವಾರ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಮೃತಪಟ್ಟಿದ್ದಾರೆ.
ಚೌರಿರ ಕುಟುಂಬಕ್ಕೆ ಸೇರಿದ ಗಣಪತಿ (49) ಮೃತರು. ಗುರುವಾರ ಬೆಳಗ್ಗೆ ಕಾಫಿ ತೋಟಕ್ಕೆ ತೆರಳಿದ ವೇಳೆ ಕಾಡಾನೆ ಹಠಾತ್ ದಾಳಿ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗಣಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಂತರ ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾಡಾನೆ ಭೀತಿಯಿಂದ ಕೆಲಸ ನಿಲ್ಲಿಸಿ ಮನೆಗಳಿಗೆ ಹಿಂದಿರುತ್ತಿದ್ದಾರೆ.
ಘಟನಾ ಸ್ಥಳಕ್ಕೆ ವಿರಾಜಪೇಟೆ ಡಿಎಫ್‌ಒ ಜಗನ್ನಾಥ್, ಎಸಿಎಫ್ ಕಾಸಿಬಾ ಬಾನು, ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ಶಿವರಾಂ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ಗಣಪತಿ ತಾಯಿ ದೇಚಮ್ಮ ಅವರಿಗೆ ಅರಣ್ಯಾಧಿಕಾರಿಗಳು 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಮಾಜಿ ಶಾಸಕರ ಭೇಟಿ: ಕಾಡಾನೆ ದಾಳಿಯ ಮಾಹಿತಿ ಪಡೆದು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್.ಭರತ್, ರೈತ ಸಂಘದ ಮುಖಂಡರು, ಬೆಳೆಗಾರರು ಆಗಮಿಸಿ ಪರಿಶೀಲನೆ ನಡೆಸಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೆಮ್ಮದಿಯಾಗಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಪ್ರದೇಶದಲ್ಲಿ ನಿರ್ಮಿಸಿರುವ ಆನೆ ಕಂದಕ ಮತ್ತು ಸೋಲಾರ್ ಬೇಲಿ ಬಹುತೇಕ ನಿಷ್ಕ್ರಿಯಗೊಂಡಿದ್ದು, ಅವುಗಳನ್ನು ದುರಸ್ತಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರಿದ್ದಾರೆ. ಅಲ್ಲದೆ ಅರಣ್ಯ ಅಂಚಿನಲ್ಲಿ ವೈಜ್ಞಾನಿಕವಾಗಿ ರೈಲ್ವೆ ಕಂಬಿಗಳನ್ನು ಅಳವಡಿಸದಿರುವುದರಿಂದ ಕಾಡಾನೆಗಳು ಸುಲಭವಾಗಿ ಕಾಫಿ ತೋಟಗಳತ್ತ ಬರುತ್ತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ದಾಳಿಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ಅಂಚಿನಲ್ಲಿ ವೈಜ್ಞಾನಿಕವಾಗಿ ರೈಲ್ವೆ ಕಂಬಿಗಳನ್ನು ಅಳವಡಿಸುವುದು, ಸೋಲಾರ್ ಬೇಲಿಗಳನ್ನು ದುರಸ್ತಿ ಮಾಡುವುದು, ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದು ಹಾಗೂ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರೈತರು ಮತ್ತು ಕಾರ್ಮಿಕರಿಗೆ ಸಮರ್ಪಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಮಾತನಾಡಿ, ಅರಣ್ಯ ಅಂಚಿನಲ್ಲಿ ಸುಮಾರು 7 ಕಿ.ಮೀ ರೈಲ್ವೆ ಕಂಬಿ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಈಗಾಗಲೇ ಅನುಮತಿ ದೊರೆತಿದ್ದು, ಆನೆಗಳನ್ನು ಸೆರೆ ಹಿಡಿಯಲು ಟ್ರಾಕ್ಕಿಂಗ್ ಆರಂಭಿಸಿದ್ದೇವೆ ಎಂದರು.
ಕಾಡಾನೆ ಸೆರೆಹಿಡಿಯಲು ಶಾಸಕರ ಸೂಚನೆ: ಶಾಸಕ ಎಸ್.ಪೊನ್ನಣ್ಣ ಅವರು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಸಿದ್ದಾಪುರ ವಲಯ ಅಧ್ಯಕ್ಷ ಪ್ರತೀಶ ಅವರಿಂದ ಘಟನೆಯ ಮಾಹಿತಿ ಪಡೆದು ಮೃತರ ಕುಟುಂಬದೊಂದೊಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ತಕ್ಷಣದಿಂದಲೇ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸುವಂತೆ ನಿರ್ದೇಶನ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net