ಕಾಂಗ್ರೆಸ್ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ಬಿಜೆಪಿ ವತಿಯಿಂದ ನಡೆದ ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಬಿಜೆಪಿ ಸೇರ್ಪಡೆಗೊಂಡರು. ಅಶ್ವತ್ಥ್ ನಾರಾಯಣ, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಸ್.ಜಿ.ಮೇದಪ್ಪ, ರವಿ ಕಾಳಪ್ಪ ಇದ್ದರು.
ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ಬಿಜೆಪಿ ವತಿಯಿಂದ ನಡೆದ ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಬಿಜೆಪಿ ಸೇರ್ಪಡೆಗೊಂಡರು. ಅಶ್ವತ್ಥ್ ನಾರಾಯಣ, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಸ್.ಜಿ.ಮೇದಪ್ಪ, ರವಿ ಕಾಳಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಳ್ಳು ಭರವಸೆ ನೀಡಿದೆ ಎಂದು ಆಕ್ರೋಶ
  • ಕೊಡಗು ರೈತ ಸಮಸ್ಯೆ ಬಗೆಹರಿಸಿಲ್ಲ ಎಂದು ಆರೋಪ
ಸೋಮವಾರಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವೈಫಲ್ಯಗೊಂಡಿದೆ ಎಂದು ಆರೋಪಿಸಿ ಮಂಡಲ ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಕ್ಷದ ಕಾರ್ಯಕರ್ತರು ವಿವೇಕಾನಂದ ಸರ್ಕಲ್‌ನಿಂದ ತೆರಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಜೇಸಿ ವೇದಿಕೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಇನ್ನು ಹಲವು ಜನರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಮಾದರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು.
ಬಿಜೆಪಿ ಮೇಲಿನ ಅಪಪ್ರಚಾರ ಮತ್ತು ಸುಳ್ಳು ಭರವಸೆಗಳಿಂದ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ಗ್ಯಾರಂಟಿಗೆ ಕೊಡುವ ಅನುದಾನಕ್ಕಿಂತ ಹೆಚ್ಚಿನ ತೆರಿಗೆಯನ್ನು ಜನರಿಗೆ ವಿಧಿಸಿದೆ. ಬಹುತೇಕ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಕಲಹ ಪ್ರಾರಂಭವಾಗಿದೆ. ಸಚಿವ ಸಂಪುಟ ಮರು ರಚನೆಯಾದ ಒಂದು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಮುಂದೆ ಬಿಜೆಪಿ ರಾಜ್ಯ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ದೇಶ ರಕ್ಷಣೆಯಲ್ಲಿ ಕೊಡಗಿನ ಸೈನಿಕರ ಕೊಡುಗೆ ಅಪಾರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೊಡಗಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅದರಲ್ಲೂ ಕೊಡಗಿನ ರೈತರ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಹಕ್ಕುಪತ್ರ ನೀಡಲಾಗುವುದು. ಒತ್ತುವರಿ ಸರ್ಕಾರಿ ಜಮೀನನ್ನು ರೈತರಿಗೆ ಲೀಜ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತಿದೆ. ಖಾಲಿ ಘೋಷಣೆ, ದೂಷಣಾ ರಾಜಕೀಯವಷ್ಟೇ ಬಾಕಿಯಿದೆ. ಇಂದು ರಾಜ್ಯದಲ್ಲಿ ಉದ್ಯೋಗಾವಕಾಶಗಳು ನಿಂತಿವೆ, ಅಭಿವೃದ್ಧಿ ಯೋಜನೆಗಳು ನಿಧಾನಗೊಂಡಿವೆ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ. ಅನೇಕರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ರೈತರು, ಕಾಫಿ ಬೆಳೆಗಾರ ಸಮಸ್ಯೆಗಳು, ರಸ್ತೆಗಳ ದುಸ್ಥಿತಿ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಡಗಿನ ರಸ್ತೆಗಳನ್ನು ಗುಂಡಿ ಮುಚ್ಚಲು ಸಾಧ್ಯವಾಗದ ಇಂದಿನ ಜನಪ್ರತಿನಿಧಿಗಳು ಕೋಟಿ ಲೆಕ್ಕದಲ್ಲಿ ಜಿಲ್ಲೆ ತಾಲೂಕನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ನನ್ನ ಅವಧಿಯಲ್ಲಿ 94 ಸಿ, 94 ಸಿಸಿ ಸೇರಿದಂತೆ 13 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದೆ. ಸಿ ಆ್ಯಂಡ್ ಡಿ ಭೂಮಿಗೂ ಅನೇಕರಿಗೆ ಹಕ್ಕುಪತ್ರ ನೀಡಿದ್ದೇವೆ. ಆ ಜಾಗದ ದುರಸ್ತಿಯೂ ಆಗಿದೆ. ಕಾಂಗ್ರೆಸ್‌ನವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ರೈತವಿರೋಧಿ ಸರ್ಕಾರ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದರು.
17ಎಸ್‌ಪಿಟಿ2- ಸೋಮವಾರಪೇಟೆಯಲ್ಲಿ ಬಿಜೆಪಿ ವತಿಯಿಂದ ನಡೆದ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net