ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಡಿ.ಡಿ.ಧರ್ಮಪ್ಪ ಹೇಳಿಕೆ
ಶನಿವಾರಸಂತೆ: ಕೊಡಗಿನಲ್ಲಿ ಸಹಕಾರ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅನಾಮಧೇಯ ಪತ್ರದ ಮೂಲಕ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಡಿ.ಡಿ.ಧರ್ಮಪ್ಪ ಹೇಳಿದರು.
ಸಹಕಾರ ವಲಯದಲ್ಲಿ ಪಾರದರ್ಶಕವಾಗಿ ವ್ಯವಹರಿಸುತ್ತ ಮತ್ತು ಕೊಡಗಿನ ಸಹಕಾರ ಬ್ಯಾಂಕ್, ಕೃಷಿ ಪತ್ತಿನ ಸಂಘ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಕಾರಣರಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಬ್ಯಾಂಕ್ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಶನಿವಾರಸಂತೆ, ನಿಡ್ತ, ಹಂಡ್ಲಿ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳಾದ ಪ್ಯಾಕ್ಸ್, ಎಪಿಸಿಎಂಎಸ್ ಸಂಸ್ಥೆಗಳಿಗೆ ಅನಾಮಧೇಯ ವ್ಯಕ್ತಿಯೊಬ್ಬ ಅಂಚೆ ಮೂಲಕ ಪತ್ರ ಬರೆದು ಆರೋಪಿಸಿದ್ದಾರೆ. ಆದರೆ ಇದೆಲ್ಲ ಸುಳ್ಳು ಆರೋಪ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ಸಂಸ್ಥೆಗಳನ್ನು ಬೆಳೆಸುತ್ತಿರುವ ಮತ್ತು ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಪ್ರಶಸ್ತಿ ಬಂದಿರುವುದಕ್ಕೆ ಕಾರಣರಾಗಿರುವ ಬಾಂಡ್ ಗಣಪತಿ ಅವರ ಸಾಧನೆಯನ್ನು ಸಹಿಸದ ಕೆಲವರು ಆರೋಪ ಮಾಡುತ್ತಿರುವುದನ್ನು ಸಹಕಾರ ವಲಯ ಖಂಡಿಸುತ್ತದೆ ಎಂದರು.
ಹಂಡ್ಲಿ ಪ್ಯಾಕ್ಸ್ ಅಧ್ಯಕ್ಷ ಎಸ್.ಎಸ್.ಚಿದಾನಂದ್ ಮಾತನಾಡಿ, ಬಾಂಡ್ ಗಣಪತಿ ಅವರ ಪ್ರಾಮಾಣಿಕತೆಯನ್ನು ಸಹಿಸದ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ಶನಿವಾರಸಂತೆ ಎಪಿಸಿಎಂಎಸ್ ಮಾಜಿ ನಿರ್ದೇಶಕ ಎಸ್.ಜೆ.ರವಿಕುಮಾರ್ ಮಾತನಾಡಿ, ಬಾಂಡ್ ಗಣಪತಿ ಅವರ ಮೇಲಿನ ಆರೋಪ ನಿರಾಧಾರವಾಗಿದ್ದು ಅವರ ಸಾಧನೆಯನ್ನು ಸಹಿಸದ ವ್ಯಕ್ತಿಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ನಿಡ್ತ ಪ್ಯಾಕ್ಸ್ ಉಪಾಧ್ಯಕ್ಷೆ ಎಸ್.ಎ.ಪೂಜಾ ವಿಜಯ್, ನಿಡ್ತ ಪ್ಯಾಕ್ಸ್ ನಿರ್ದೇಶಕ ಜಿ.ಜಿ.ಪರಮೇಶ್, ಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಎನ್.ಕುಮಾರ್, ನಿಡ್ತ ಪ್ಯಾಕ್ಸ್ ಅಧ್ಯಕ್ಷ ಡಿ.ಎಸ್.ಮಲ್ಲೇಶ್ ಪ್ರಮುಖರಾದ ವಿಜಯ್‌ಕುಮಾರ್, ಸಂದೀಪ್, ದೀಪಕ್ ಇತರರು ಇದ್ದರು.