ವಿರಾಜಪೇಟೆ: ಸರ್ಕಾರಿ ನೌಕರರಾಗಿ ಅನೇಕ ವರ್ಷದಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಇದು ನಿಮ್ಮ ಸಾರ್ಥಕವಾದ ಬದುಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ವಿರಾಜಪೇಟೆ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ವಿರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಮಹಾಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಸೇವೆ ಸುಲಭವಾದುದ್ದಲ್ಲ. ಜನರ ಕೆಲಸ ಕಾರ್ಯದಲ್ಲಿ, ಟೀಕೆಗಳು ಇನ್ನಿತರ ಸಮಸ್ಯೆಗಳ ಒತ್ತಡ ಇದ್ದೇ ಇರುತ್ತದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಉತ್ತಮವಾಗಿ ಕೆಲಸಮಾಡಬೇಕು ಎಂದರು.
ಯಾರೋ ಒತ್ತಾಯಿಸಿದರು ಎಂಬ ಕಾರಣಕ್ಕೆ ನೀವು ಸರ್ಕಾರಿ ಕೆಲಸಕ್ಕೆ ಸೇರಿಲ್ಲ. ಇದು ನಿಮ್ಮ ಆಯ್ಕೆ, ಜನರ ಸೇವೆಯೇ ಪ್ರಮುಖವಾಗಿರಬೇಕು ಎಂಬ ಅರಿವಿರಬೇಕು ಎಂದರು.
ಜನರ ಸಮಸ್ಯೆ ಬಗೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದಿದ್ದರೇ ಸಹಜವಾಗಿ ಆರೋಪಗಳು ಬರುತ್ತದೆ. ಆದರಿಂದ ಇಲಾಖೆಗಳಲ್ಲಿ ಎಲ್ಲವನ್ನು ಅರಿತುಕೊಂಡು ನಿಭಾಯಿಸಬೇಕು. ಜತೆಗೆ ಸೇವೆಯಲ್ಲಿದ್ದಾಗ ಮನಸ್ತಾಪ, ನೋವುಗಳು ಇದ್ದೇ ಇರುತ್ತದೆ. ಭಡ್ತಿ ವಿಚಾರದಲ್ಲಿ, ವರ್ಗಾವಣೆ ವಿಚಾರದಲ್ಲಿ ಬೇಸರ ಮಾಡಿಕೊಳ್ಳದೇ ಕೆಲಸ ಮಾಡಬೇಕಾಗುತ್ತದೆ. ನೌಕರರ ಬೇಡಿಕೆಯಂತೆ ಭವನ ನಿರ್ಮಾಣ ಮತ್ತು ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವ ಭರವಸೆಯನ್ನು ಶಾಸಕ ಪೊನ್ನಣ್ಣ ನೀಡಿದರು.
ಸಮಾರಂಭದಲ್ಲಿ ವಿವಿಧ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕ ನೌಕರರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಸಕ ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಸನ್ಮಾನಿಸಿದರು.
ಸಂಘದ ಖಜಾಂಚಿ ಎನ್.ಎಸ್.ಬಸವರಾಜು 2024-25ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಂಘದ ಅಧ್ಯಕ್ಷ ಕೆ.ಎಂ.ತಿಮ್ಮಯ್ಯ, ಕಾರ್ಯದರ್ಶಿ ಬಿ.ಟಿ ದೇವರಾಜ್, ರಾಜ್ಯ ಪರಿಷತ್ ಸದಸ್ಯ ಸುರೇಂದ್ರ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.