ಗುಂಡಿ ಬಿದ್ದ ರಸ್ತೆ ಸರಿಪಡಿಸಲು 20 ದಿನ ಗಡುವು

ವಿರಾಜಪೇಟೆಯ ಬಾಳುಗೋಡು-ಪೆರುಂಬಾಡಿ ಜಂಕ್ಷನ್ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಿ.ಎಂ.ಗಣೇಶ್, ಬಿಟ್ಟಂಗಾಲ ಗ್ರಾ.ಪಂ.ಮಾಜಿ ಸದಸ್ಯ ರಾಜ ಸೋಮಣ್ಣ,  ನವೀನ್, ಬಿ.ಎ.ಜೀವನ್, ಕೆ.ಕೆ. ಅನಿಲ್ ಕುಮಾರ್, ಸುನೀಲ್ ಕುಟ್ಟಪ್ಪ ಇತರರು ಇದ್ದರು.
ವಿರಾಜಪೇಟೆಯ ಬಾಳುಗೋಡು-ಪೆರುಂಬಾಡಿ ಜಂಕ್ಷನ್ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಿ.ಎಂ.ಗಣೇಶ್, ಬಿಟ್ಟಂಗಾಲ ಗ್ರಾ.ಪಂ.ಮಾಜಿ ಸದಸ್ಯ ರಾಜ ಸೋಮಣ್ಣ, ನವೀನ್, ಬಿ.ಎ.ಜೀವನ್, ಕೆ.ಕೆ. ಅನಿಲ್ ಕುಮಾರ್, ಸುನೀಲ್ ಕುಟ್ಟಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಟ್ಟಂಗಾಲ ಬಾಳುಗೋಡು ಪೆರಂಬಾಡಿ ಮಾರ್ಗ ಅವ್ಯವಸ್ಥೆ
  • ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ವಿರಾಜಪೇಟೆ : ಕರ್ನಾಟಕದಿಂದ ಕೇರಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಬಿಟ್ಟಂಗಾಲ ಬಾಳುಗೋಡು ಪೆರಂಬಾಡಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. 20 ದಿನದಲ್ಲಿ ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಆರ್ಜಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಗುಂಡಿಗಳು ಬಿದ್ದು ಕೆಸರು ನೀರು ತುಂಬಿಕೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ನಿತ್ಯ ಪರದಾಡುವಂತಾಗಿದೆ. ರಸ್ತೆ ದುರಸ್ತಿಗೆ ಒತ್ತಾಯಿಸಿ ಬಾಳುಗೋಡು-ಪೆರುಂಬಾಡಿ ಜಂಕ್ಷನ್‌ನಲ್ಲಿ ಪೆರುಂಬಾಡಿ ಹಾಗೂ ಬಾಳುಗೋಡು ಗ್ರಾಮಸ್ಥರು ಹಾಗೂ ಚಾಲಕರು ಒಂದಾಗಿ ಬುಧವಾರ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಪರಿಹಾರಕ್ಕೆ ಆಗ್ರಹ: ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಬಿ.ಎಂ.ಗಣೇಶ್ ಮಾತನಾಡಿ, ಸಂಪೂರ್ಣ ರಸ್ತೆ ನಿರ್ಮಾಣ ತಕ್ಷಣಕ್ಕೆ ಸಾಧ್ಯವಾಗದಿದ್ದರೂ, ಕನಿಷ್ಠ ವೆಟ್ ಮಿಕ್ಸ್ ಬಳಸಿ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬರಿ ಮಣ್ಣು ಹಾಕಿದರೆ ಮಳೆಗೆ ಕೊಚ್ಚಿ ಹೋಗುತ್ತದೆ. ಅಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ಮುಖ್ಯ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಸಾಮಾನ್ಯ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಆಡಳಿತ ವರ್ಗ ತಕ್ಷಣ ಎಚ್ಚೆತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ನೀಡಿದ ಗಡುವಿನೊಳಗೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿದ್ದಲ್ಲಿ, ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರೆಲ್ಲರೂ ಒಂದಾಗಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬಿಟ್ಟಂಗಾಲ ಗ್ರಾ.ಪಂ. ಮಾಜಿ ಸದಸ್ಯ ರಾಜ ಸೋಮಣ್ಣ ಮಾತನಾಡಿ, ಈ ಪ್ರಮುಖ ರಸ್ತೆ ಹಾಳಾಗಿರುವುದರಿಂದ ಕೇರಳಕ್ಕೆ ತೆರಳುವ ನೂರಾರು ಬಸ್, ಲಾರಿ ಹಾಗೂ ಇತರ ವಾಹನಗಳು ಈ ಮಾರ್ಗವಾಗಿ ತೆರಳಬೇಕಿದೆ. ಈ ರಸ್ತೆ ಸಂಪೂರ್ಣ ಕೆಟ್ಟಿರುವುದರಿಂದ ವಿರಾಜಪೇಟೆ ಮಾರ್ಗ ಬಳಸಬೇಕಾಗುತ್ತದೆ. ಇದರಿಂದ ವಿರಾಜಪೇಟೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ರಸ್ತೆಯ ಎರಡೂ ಬದಿ ಚರಂಡಿಗಳು ಮುಚ್ಚಿಹೋಗಿ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಗುಂಡಿಗಳಲ್ಲಿ ನೀರು ನಿಂತು ಸವಾರರಿಗೆ ಕಾಣಿಸದೆ ಅಪಘಾತಗಳು ಸಂಭವಿಸಿದ್ದು, ಇತ್ತೀಚೆಗೆ ದ್ವಿಚಕ್ರ ವಾಹನ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ ಇರಲಿ, ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಲಾ-ಕಾಲೇಜು ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ರೂಪಾ ಅಳಲು ತೋಡಿಕೊಂಡರು.
ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ಬಿದ್ದು ಗಾಯಗೊಳ್ಳುವ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, 20 ದಿನಗಳ ಒಳಗೆ ಗುಂಡಿಗಳನ್ನು ಮುಚ್ಚಿ ಸಂಚಾರ ಯೋಗ್ಯಗೊಳಿಸಬೇಕು ಎಂದು ಸ್ಥಳೀಯರಾದ ರಜನಿ ಹೇಳಿದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನವೀನ್, ಬಿ.ಎ.ಜೀವನ್, ಕೆ.ಕೆ. ಅನಿಲ್ ಕುಮಾರ್, ಸುನೀಲ್ ಕುಟ್ಟಪ್ಪ, ಹರೀಶ್ ಕೆ.ಬಿ, ಸಪ್ನ, ದೇವಕ್ಕಿಯಮ್ಮ, ಜನಾರ್ದನ, ಸುನು, ದೇವದಾಸ್, ಮುತ್ತಪ್ಪ, ಅಯ್ಯುಬ್, ಉಮೇಶ್, ರಾಯ್ ಥೋಮಸ್, ನಾಸರ್, ನವೀನ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net