

Earthquake : ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಪ್ರವಾಸಿಗರ ನೆಚ್ಚಿನ ತಾಣ ಕೊಡಗಿನಲ್ಲಿ ಇಂದು (ಮಾರ್ಚ್ 12) ಭೂಕಂಪನದ ಅನುಭವವಾಗಿದೆ.
ಕೊಡಗಿನ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದೆ. ಮದೆನಾಡು ಗ್ರಾಮ ಪಂಚಾಯಿತಿಯ ವಾಯವ್ಯ ದಿಕ್ಕಿನಲ್ಲಿ 2.4 ಕಿಮೀ ದೂರದ 5 ಕಿಮೀ ಆಳವನ್ನು ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.
ರಿಕ್ಟರ್ ಮಾಪಕದಲ್ಲಿ ಸುಮಾರು 1.6 ರಷ್ಟು ಪ್ರಮಾಣದಲ್ಲಿ ಭೂಕಂಪನ ದಾಖಲಾಗಿದೆ. ಇಂದು ಬೆಳಗ್ಗೆ 10.49ರ ಸುಮಾರಿಗೆ ಭೂಮಿ ಕಂಪಿಸಿದೆ. ಮಡಿಕೇರಿಯಿಂದ 4 ಕಿಮೀ, 2ನೇ ಮೊಣ್ಣಂಗೇರಿಯಿಂದ 4.5 ಕಿಮೀ, ಹಾರಂಗಿ ಅಣೆಕಟ್ಟೆಯಿಂದ 23.8 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ.
ಮದೆನಾಡು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಭೂ ಕಂಪನದಿಂದ ಯಾವುದೇ ಹಾನಿ ಸಂಭವಿಸಿದ ವರದಿ ಇಲ್ಲ. ಅಂದಹಾಗೆ 2018ರಲ್ಲಿ ಇದೇ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿತ್ತು. ಈ ವೇಳೆ ಸಾಕಷ್ಟು ಸಾವು-ನೋವುಗಳಾಗಿತ್ತು.