ದರ್ಶನ್​ ಅನ್​ಫಾಲೋ ಸುಂಟರಗಾಳಿ! ಮಾರ್ಮಿಕ ಪೋಸ್ಟ್​ ವೈರಲ್​ ಆಗ್ತಿದ್ದಂತೆ ಸುಮಲತಾ ಕೊಟ್ಟ ಸ್ಪಷ್ಟನೆ ಹೀಗಿದೆ... Sumalatha Ambareesh

Sumalatha Ambareesh
Published on

Sumalatha Ambareesh : ಸುಮಲತಾ ಅಂಬರೀಷ್​​, ಅಭಿಷೇಕ್​ ಸೇರಿದಂತೆ ಒಟ್ಟು 6 ಮಂದಿಯನ್ನು ಇನ್​ಸ್ಟಾಗ್ರಾಂನಿಂದ ನಟ ದರ್ಶನ್​ ಅನ್​ಫಾಲೋ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನೇಕ ಊಹಾಪೋಹಗಳಿಗೆ ಸುಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ.

ಸುಮಲತಾ ಅಂಬರೀಷ್​, ಅಭಿಷೇಕ್​ ಅಂಬರೀಷ್​, ಅವಿವಾ, ಪುತ್ರ ವಿನೀಶ್​, ಡಿ ಕಂಪನಿ ಹಾಗೂ ತಮ್ಮ ದಿನಕರ್​ ತೂಗುದೀಪ್​ ಅವರನ್ನು ನಟ ದರ್ಶನ್​ ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ. ಈ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡ ಬೆನ್ನಲ್ಲೇ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸುಮಲತಾ ಅವರು ಹಂಚಿಕೊಂಡ ಮಾರ್ಮಿಕ ಪೋಸ್ಟ್​ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು. ಸತ್ಯವನ್ನು ತಿರುಚುವ, ಪಶ್ಚಾತ್ತಾಪವಿಲ್ಲದೆ ಜನರನ್ನು ನೋಯಿಸುವ, ಆರೋಪವನ್ನು ಹೊರಿಸುವ ಮತ್ತು ಹೇಗಾದರೂ ತಮ್ಮನ್ನು ತಾವು ನಾಯಕ ಎಂದು ಪರಿಗಣಿಸುವವರಿಗೆ ಆಸ್ಕರ್​ ಪ್ರಶಸ್ತಿ ನೀಡಬೇಕೆಂದು ಇನ್‌ಸ್ಟಾಗ್ರಾಂ​ನಲ್ಲಿ ಬರೆದುಕೊಂಡಿದ್ದರು. ದರ್ಶನ್​ ಅನ್​ಫಾಲೋ ಮಾಡಿದ ಬೆನ್ನಲ್ಲೇ ಈ ಪೋಸ್ಟ್​ ಮಾಡಿದ್ದರಿಂದ ದರ್ಶನ್​ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿವೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಫೇಸ್​ಬುಕ್​ ಮೂಲಕ ಸಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ.

ನನ್ನ ಹಿಂದಿನ ಒಂದು ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿ ಆಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಿದ್ದಲ್ಲ, ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸವನ್ನು ನಾನು ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು. ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಅವರ ಮಗನನ್ನೂ ಕೂಡ. ಇದು ಅವರ ವೈಯಕ್ತಿಕ ಆಯ್ಕೆ ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ. ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್‌ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ ಎಂದು ಸುಮಲತಾ ಅವರು ಹೇಳಿದ್ದಾರೆ.

ನಟ ದರ್ಶನ್​, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ದರ್ಶನ್​ ಅವರನ್ನು ಕಂಡು, ಸಾಂತ್ವಾನ ಹೇಳಲು ಅಂದರೆ, ಧೈರ್ಯ ತುಂಬಲು ಸಾಕಷ್ಟು ಕಲಾವಿದರು ಜೈಲಿಗೆ ಭೇಟಿ ನೀಡಿ ಬಂದಿದ್ದರು. ಹಾಸ್ಯ ನಟ ಸಾಧುಕೋಕಿಲ, ನಟಿ ರಚಿತಾ ರಾಮ್​, ನಟ ಧನ್ವೀರ್​, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ವಿನೋದ್​ ಕುಮಾರ್​, ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್​ ಸೇರಿದಂತೆ ಅನೇಕ ಮಂದಿ ಜೈಲಿಗೆ ಭೇಟಿ ನೀಡಿ ಬಂದಿದ್ದರು. ಆದರೆ, ದರ್ಶನ್​ರನ್ನು ಮಗ ಎಂದು ಹೇಳುತ್ತಿದ್ದ ಸುಮಲತಾ ಮಾತ್ರ ಒಮ್ಮೆಯೂ ಜೈಲಿಗೆ ಭೇಟಿ ನೀಡಲಿಲ್ಲ. ಅವರ ಕುಟುಂಬದ ಯಾರೋಬ್ಬರು ಕೂಡ ಜೈಲಿನ ಹತ್ತಿರವೂ ಸುಳಿಯಲಿಲ್ಲ. ಒಂದೆರೆಡು ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಸುಮಲತಾ ಮಾತನಾಡಿದರು. ಆದರೆ, ಹೆಚ್ಚಿಗೆ ಮಾತನಾಡದೇ ಪ್ರಕರಣದಿಂದ ಅಂತರ ಕಾಯ್ದುಕೊಂಡರು. ಸಂಕಷ್ಟ ಕಾಲದಲ್ಲಿ ಜೈಲಿನಿಂದ ಬಿಡಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಕನಿಷ್ಠ ಪಕ್ಷ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ ಎಂಬ ಅಸಮಾಧಾನ ದರ್ಶನ್​ ಅವರಲ್ಲಿದೆ ಎನ್ನಲಾಗಿದೆ. ಈ ಹಿಂದೆ ಚುನಾವಣೆಯಲ್ಲಿ ಬೆನ್ನುಲುಬಾಗಿ ನಿಂತು ಗೆಲ್ಲುವರೆಗೂ ಶ್ರಮ ಹಾಕಿದ್ದರು ದರ್ಶನ್​. ಆದರೆ, ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಲ್ಲದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಆ ಒಂದು ಅಸಮಾಧಾನವನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಕೇವಲ ಅಂಬರೀಷ್​ ಕುಟುಂಬವನ್ನು ಮಾತ್ರ ಅನ್​ಫಾಲೋ ಮಾಡಿದರೆ ಭಾರಿ ಚರ್ಚೆಯಾಗುತ್ತದೆ ಅನ್ನೋ ಕಾರಣಕ್ಕೇ ತಾನು ಫಾಲೋ ಮಾಡುತ್ತಿದ್ದ ಅಷ್ಟೂ ಮಂದಿಯನ್ನು ದರ್ಶನ್​ ಅನ್​ಫಾಲೋ ಮಾಡಿದ್ದಾರೆ ಎಂದು ಬಿಸಿಬಿಸಿ ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net