ಕೋಚಿಮುಲ್ ರಾಜಕೀಯ ಲಾಭದ ನಡೆ

ಚಿಕ್ಕಬಳ್ಳಾಪುರದ ಮೆಗಾ ಡೇರಿಗೆ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಒಕ್ಕೂಟದ ನಿರ್ದೇಶಕರಾದ ಭರಣಿ ವೆಂಕಟೇಶ್, ಆದಿನಾರಾಯಣರೆಡ್ಡಿ, ಸುನಂದಮ್ಮ ಮತ್ತಿತರರು ಇದ್ದರು.
25 CBP
ಚಿಕ್ಕಬಳ್ಳಾಪುರದ ಮೆಗಾ ಡೇರಿಗೆ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಒಕ್ಕೂಟದ ನಿರ್ದೇಶಕರಾದ ಭರಣಿ ವೆಂಕಟೇಶ್, ಆದಿನಾರಾಯಣರೆಡ್ಡಿ, ಸುನಂದಮ್ಮ ಮತ್ತಿತರರು ಇದ್ದರು.
Published on

ಬಿಜೆಪಿ-ಜೆಡಿಎಸ್ ಬೆಂಬಲಿತರ ನಡುವೆ ಕ್ರೆಡಿಟ್ ವಾರ್ ಚುನಾವಣೆ ಬಳಿಕ ಒಕ್ಕೂಟ ವಿಭಜನೆ



ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸುವ ವಿಚಾರದಲ್ಲಿಯೇ ಚುನಾವಣೆಗೆ ರಾಜಕೀಯ ಲಾಭ ನಡೆಯುತ್ತಿದೆ.
ಹೌದು! ಒಂದೆಡೆ ಒಕ್ಕೂಟದ ಚುನಾವಣೆಯನ್ನು ತ್ವರಿತವಾಗಿ ನಡೆಸಬೇಕು ಎಂಬ ಒತ್ತಡ, ಮತ್ತೊಂದೆಡೆ ಒಕ್ಕೂಟದ ವಿಭಜನೆಯ ಬಳಿಕ ಚುನಾವಣೆ ಮಾತು ಕೇಳಿ ಬರುತ್ತಿದೆ. ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಬೆಂಬಲಿತ ನಿರ್ದೇಶಕರು, ಮಾಜಿ ನಿರ್ದೇಶಕರು ಈಗಾಗಲೇ ರಾಗವನ್ನು ಎಳೆಯುತ್ತಾ ಚುನಾವಣಾ ಗೆಲುವಿನ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಡಾ.ಕೆ.ಸುಧಾಕರ್ ಸ್ವಪಕ್ಷೀಯ ಸರ್ಕಾರದ ಮೇಲೆ ಒತ್ತಡ ಹೇರಿ, ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆ ೋಷಿಸಿದ್ದರು. ವಿಶೇಷ ಸಭೆಗಳು, ಅನುಮೋದನೆ, ಆಡಳಿತಾಧಿಕಾರಿ ನೇಮಕ ಸೇರಿ ನಾನಾ ಪ್ರಕ್ರಿಯೆಗಳು ನಡೆದಿದ್ದು, ಇದರ ನಡುವೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವೈಜ್ಞಾನಿಕ ವಿಭಜನೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರ ಮೊಟಕು ವಿಷಯದ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ವಿವಾದ ಉಂಟಾಗಿತ್ತು. ಕೊನೆಗೆ ಬಿಜೆಪಿ ಸರ್ಕಾರ ಬಿದ್ದು ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ವಿಭಜನೆಯ ಆದೇಶವನ್ನು ಹಿಂಪಡೆದಿದ್ದು, ಈಗ ವೈಜ್ಞಾನಿಕ ಪ್ರತ್ಯೇಕತೆಯ ಮಾತನ್ನು ಹೇಳಲಾಗುತ್ತಿದೆ.

ಲಾಭದ ಲೆಕ್ಕಾಚಾರ
ಒಕ್ಕೂಟದ ವಿಭಜನೆಯ ಹೆಸರಿನಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಬೆಂಬಲಿತರ ನಡುವೆ ಕ್ರೆಡಿಟ್ ವಾರ್ ಹಗ್ಗ ಜಗ್ಗಾಟ ನಡೆಯುತ್ತಿದೆ. ಹಿಂದೆ ಪ್ರತ್ಯೇಕತೆಯ ಕೊಡುಗೆ ಕೀರ್ತಿ ಸುಧಾಕರ್ ಪಾಲಾಗುತ್ತದೆ ಎಂಬ ಭಾವನೆಯಲ್ಲಿ ವಿಭಜನೆಯನ್ನು ಕೈ ಪಡೆಯು ವಿರೋಧಿಸಿತ್ತು. ಹಾಗೆಯೇ ಈಗ ಒಕ್ಕೂಟ ರಚನೆಯ ಬಳಿಕ ಚುನಾವಣೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮೊದಲು ಚುನಾವಣೆ ನಡೆಯಲಿ, ಬಳಿಕ ಒಕ್ಕೂಟ ರಚನೆಯಾಗಲಿ ಎನ್ನುತ್ತಿದ್ದಾರೆ ಸುಧಾಕರ್ ಬೆಂಬಲಿಗರು. ಈಗಾಗಲೇ ಒಕ್ಕೂಟದ ಆಡಳಿತದ ಅವಧಿಯ ಅನವಶ್ಯಕ ವಿಸ್ತರಣೆ ಮತ್ತು ಚುನಾವಣಾ ಪ್ರಕ್ರಿಯೆ ಮುಂದೂಡಿಕೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿಭಜನೆ ಪ್ರಕ್ರಿಯೆ
ಈಗಾಗಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಕ್ಕೂಟದ ವಿಭಜನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲೂ ಯೋಜಿಸಲಾಗಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಭಜನೆಯ ಬಗ್ಗೆ ಚರ್ಚಿಸಿದ್ದಾರೆೆ. ಹಾಗೆಯೇ ಒಕ್ಕೂಟದ ವಿಶೇಷ ಸಭೆಯಲ್ಲೂ ಪ್ರತ್ಯೇಕತೆಯ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದು ಒಕ್ಕೂಟ ಚುನಾವಣೆ ಮುಗಿದ ಬಳಿಕ ಕಾರ್ಯ ರೂಪಕ್ಕೆ ಬರುತ್ತದೆ ಎನ್ನಲಾಗಿದೆ.

ಅಧಿಕಾರದ ಅವಧಿ ಅಂತ್ಯ
ಕಳೆದ ಮಾರ್ಚ್‌ಗೆ ಒಕ್ಕೂಟ ನಿರ್ದೇಶಕರ ಅಧಿಕಾರಾವಧಿಯು ಅಂತ್ಯಗೊಂಡಿದ್ದು, ಸಹಕಾರ ಇಲಾಖೆಯು ಚುನಾವಣೆಯನ್ನು ೋಷಿಸಿತ್ತು. ಆದರೆ, ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಅಭಿವೃದ್ಧಿ, ಹಗರಣಗಳ ಪ್ರಚಾರ

ಚಿಕ್ಕಬಳ್ಳಾಪುರದ ಮೆಗಾ ಡೇರಿಯಲ್ಲಿ 130 ಕೋಟಿ ರೂ.ವೆಚ್ಚದ ಹಾಲಿನ ಪ್ಯಾಕಿಂಗ್ ಘಟಕಕ್ಕೆ ಡಿಪಿಆರ್ ಆಗಿದೆ. ಕೋಲಾರದ ಹೂಳಲಿ ಸಮೀಪ 50 ಎಕರೆ ಜಮೀನಿನಲ್ಲಿ 60 ಕೋಟಿ ರೂ.ವೆಚ್ಚದಲ್ಲಿ ಸೋಲಾರ್ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೇ.75 ರಷ್ಟು ಕೆಲಸವಾಗಿದೆ. ಇದು ಪೂರ್ಣಗೊಂಡ ಬಳಿಕ ಬೆಸ್ಕಾಂಗೆ ಪ್ರತಿ ತಿಂಗಳು ಪಾವತಿಸುವ 2 ಕೋಟಿ ರೂ.ಹೊರೆ ತಪ್ಪಲಿದೆ. ಚಿಂತಾಮಣಿಯಲ್ಲಿ 55 ಕೋಟಿ ರೂ.ವೆಚ್ಚದಲ್ಲಿ 10 ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯದ ಐಸ್ ಕ್ರೀಂ ಘಟಕ ಕಾಮಗಾರಿ, ಕೋಲಾರದಲ್ಲಿ 220 ಕೋಟಿ ರೂ.ವೆಚ್ಚದಲ್ಲಿ ಗೋಲ್ಡನ್ ಡೈರಿ ನಿರ್ಮಾಣ ಸೇರಿ ನಾನಾ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಇವು ಕಾಂಗ್ರೆಸ್‌ಗೆ ಚುನಾವಣಾ ಪ್ರಚಾರದ ಸರಕಾಗಲಿದೆ. ಇನ್ನು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹಗರಣ, ಟೆಂಡರ್ ಕಾಮಗಾರಿಯಲ್ಲಿ ಅವ್ಯವಹಾರ ಸೇರಿ ನಾನಾ ಅಕ್ರಮಗಳು ಬಿಜೆಪಿ ಪಾಳಯಕ್ಕೆ ಅಸಗಳು ಎಂದು ಹೇಳಲಾಗುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜಿಸಿ, ಚಿಮುಲ್ ರಚನೆಯಾದ ಬಳಿಕವಷ್ಟೇ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತದೆ. ಪ್ರತ್ಯೇಕತೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಪ್ರಕ್ರಿಯೆಯು ರೈತರಿಗೆ ಲಾಭದಾಯಕ ಮತ್ತು ವೈಜ್ಞಾನಿಕವಾಗಿರಬೇಕು. ಈ ನಿಟ್ಟಿನಲ್ಲಿ ಚರ್ಚೆಯಾಗಿದೆ.
ಕೆ.ವೈ.ನಂಜೇಗೌಡ ಕೋಚಿಮುಲ್ ಅಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net