

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮ ಹೊರವಲಯದಲ್ಲಿ ಸೋಮವಾರ ಮುಂಜಾನೆ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.
ಗ್ರಾಮದ ಸುರೇಶ್ ಎಂಬುವರ ಪುತ್ರ ವಿನೋದ್(32) ಅಲಿಯಾಸ್ ವಿನು, ಕುಂಟ ವಿನು ಕೊಲೆಯಾದ ಯುವಕ. ವಿನೋದ್ ಪಾಲಹಳ್ಳಿ ಗ್ರಾಮ, ತಾಲೂಕು ಸೇರಿದಂತೆ ಜಿಲ್ಲೆಯ ಸುತ್ತಮುತ್ತ ಎತ್ತಿನ ಕರುಗಳ ರೇಕ್ಲಾ ರೇಸ್‌ಗಳಲ್ಲಿ ಭಾಗಿಯಾಗಿ ಹೆಸರು ಗಳಿಸಿದ್ದ. ಕೆಲ ಗಲಾಟೆಗಳಲ್ಲಿ ಪಾಲ್ಗೊಂಡು ರೌಡಿಶೀಟರ್ ಪಟ್ಟಿಯಲ್ಲಿದ್ದ.
ಸ್ವಗ್ರಾಮ ಪಾಲಹಳ್ಳಿ ಸಮೀಪದ ಲಕ್ಷ್ಮಿಪುರ ಗೇಟ್ ಬಳಿಯ ತಮ್ಮ ಜಮೀನಿನಲ್ಲಿ ಎತ್ತುಗಳು ಹಾಗೂ ಕೆಲ ಹಸುಗಳನ್ನು ಸಾಕಿಕೊಂಡು ಜೀವನ ನಿರ್ವಹಿಸುತ್ತಿದ್ದ.
ಸೋಮವಾರ ಮುಂಜಾನೆ 5.30ರ ವೇಳೆ ಪಾಲಹಳ್ಳಿ ಗ್ರಾಮದಿಂದ ರೈಲ್ವೆಹಳಿ ಸೇತುವೆಯ ಫ್ಲೈ ಓವರ್ ರಸ್ತೆ ಮೇಲೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಿಳಿ ಬಣ್ಣದ ಓಮ್ನಿ ಕಾರು ಸೇತುವೆ ರಸ್ತೆ ಅಂಚಿನಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿನು ತನ್ನ ವಾಹನದ ಸಮೇತ ರಸ್ತೆ ಪಕ್ಕದ ಜಮೀನಿನ ಕಿರು ನಾಲೆಗೆ ಬಿದ್ದಿದ್ದು, ಕಾರೂ ಜಮೀನಿಗೆ ಹಾರಿ ನಿಂತಿದೆ. ಈ ವೇಳೆ ಓಮ್ನಿ ಕಾರಿನಿಂದ ಇಳಿದವರು ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ 6ಕ್ಕೂ ಹೆಚ್ಚು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕಾರನ್ನು ಸ್ಥಳದಲ್ಲೇ ಬಿಟ್ಟು ಇತರ ವಾಹನಗಳಲ್ಲಿ ಪರಾರಿಯಾಗಿದ್ದಾರೆ.
ಘಟನೆ ನಡೆದ ಕೆಲ ಹೊತ್ತಿಗೆ ಆಗಮಿಸಿದ ಮೃತ ಯುವಕನ ಅಣ್ಣ ಪ್ರಮೋದ್ ಸಹಾಯಕ್ಕೆ ಚೀರಿಕೊಂಡು ಸ್ಥಳೀಯರ ನೆರವಿನಿಂದ ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆಗೆ ಮೊದಲೇ ವಿನು ಮೃತಪಟ್ಟಿದ್ದಾನೆ.
ಘಟನೆಯಿಂದ ಪಾಲಹಳ್ಳಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದು ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಪೊಲೀಸ್ ತುಕಡಿಯೊಂದಿಗೆ ದೌಡಾಯಿಸಿ ಗ್ರಾಮದಲ್ಲಿ ಪೊಲೀಸ್ ಭಿಗಿ ಭದ್ರತೆ ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿವೈಎಸ್ಪಿ ಮುರಳಿ ಭೇಟಿ ನೀಡಿ ಪರಿಶೀಲಿಸಿದ್ದು ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿಯೊಂದಿಗೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪಿಎಸ್ಸೈ ಶಿವಲಿಂಗ ದಳವಾಯಿ ಮಾಹಿತಿ ಕಲೆ ಹಾಕಿದರು.
ಪ್ರೀತಿ ವಿಚಾರಕ್ಕೆ ಯುವಕರ ಮಧ್ಯೆ ನಡೆದಿದ್ದ ಹಳೇ ಗಲಾಟೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬ ಶಂಕೆ ಪೊಲೀಸರಿಗೆ ದೊರೆತಿದ್ದು, ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪರೀಕ್ಷೆ ಬಳಿಕ ಮೃತ ಯುವಕನ ಶವವನ್ನು ಹಸ್ತಾಂತರಿಸಲಾಗಿದ್ದು, ಮೃತ ಯುವಕನ ಸಂಬಂಧಿಕರು ನೀಡಿದ ದೂರಿನನ್ವಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.