ಕಡತದಲ್ಲುಳಿದ ಮೆಗಾ ಟೆಕ್ಸ್ ಟೈಲ್ ಪಾರ್ಕ್ : ಗೊಂದಲದಲ್ಲಿ ಔಟರ್ ರಿಂಗ್ ರೋಡ್ ; ಕಲಬುರಗಿ ಜನರ ಸಮಸ್ಯೆಯತ್ತ ಹರಿಯಲಿ ಸಿಎಂ ಚಿತ್ತ

FB_IMG_1691212608431
Published on

ಬಾಬುರಾವ ಯಡ್ರಾಮಿ
ಕಲಬುರಗಿ ಜಿಲ್ಲೆ ಹೊನ್ನಕಿರಣಗಿ, ಫಿರೋಜಾಬಾದ್ ಬಳಿ ೧೦೦೦ ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಪಿಎಂ ಮಿತ್ರ ಯೋಜನೆಯಡಿ ಮಂಜೂರು ಮಾಡಿದ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಕಡತಕ್ಕೇ ಸೀಮಿತವಾಗಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಮೂರು ಜಿಲ್ಲೆಗಳ ಹೆಸರುಗಳಲ್ಲಿ ಕೇಂದ್ರ ಕಲಬುರಗಿಗೆ ಮೊಹರು ಒತ್ತಿದೆ. ಇದು ಈ ಭಾಗದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷಕ್ಕೂ ಅಧಿಕ ದುಡಿಯುವ ಕೈಗಳಿಗೆ ಕೆಲಸ ಕೊಡುವ ದೊಡ್ಡ ಯೋಜನೆ. ಆದರೆ ಇದರ ಪ್ರಾರಂಭಿಕ ಕೆಲಸಗಳು ಸಹ ಶುರುವಾಗದಿರುವುದು ನಿರುದ್ಯೋಗಿಗಳಲ್ಲಿ ನಿರಾಸೆ ತಂದಿದೆ. ಕಳೆದ ಮಾರ್ಚ್ ೨೭ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ತರಾತುರಿಯಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಈವರೆಗಿನ ದೊಡ್ಡ ಕೆಲಸ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮನ್ವಯ ಸಾಧಿಸಿ ಈ ಪಾರ್ಕ್ಗೆ ಉದ್ಯಮಿಗಳಿಂದ ಬಂಡವಾಳ ಹೂಡಿಸಿ ಕಾಮಗಾರಿಗೆ ಮೂರ್ತ ಸ್ವರೂಪ ನೀಡಬೇಕೆಂಬುದು ಸ್ಥಳೀಯರ ಆಶಯ. ಇನ್ನು ಈ ಭಾಗದಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ. ಹೀಗಾಗಿ ಪ್ರತಿವರ್ಷ ಸಹಸ್ರಾರು ಮಂದಿ ಕೆಲಸ ಅರಸಿ ಗುಳೆ ಹೋಗುವುದು ಸಾಮಾನ್ಯ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಉದ್ಯಮಿದಾರರನ್ನು ಈ ಕಡೆ ಸೆಳೆದು ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಬಂಡವಾಳ ಹೂಡಿಕೆದಾರರು ಹುಬ್ಬಳ್ಳಿ, ಧಾರವಾಡವರೆಗೆ ಸೀಮಿತವಾಗುತ್ತಿದ್ದಾರೆ. ಅವರನ್ನು ಕಲಬುರಗಿ, ಬೀದರ್ ಕಡೆ ಸೆಳೆಯುವ ಕೆಲಸ ಸರ್ಕಾರ ಮಾಡಿದರೆ ಬರುವ ಕೆಲ ವರ್ಷಗಳಲ್ಲಿ ಸ್ಥಿತಿ ಬದಲಾಗಬಹುದು.


ಜ್ಞಾನಗಂಗೆಗೆ ಗುತ್ತಿಗೆ ನೌಕರರೇ ಗತಿ
ಜ್ಞಾನಗಂಗೆ ಎಂದೇ ಕರೆಸಿಕೊಳ್ಳುವ ಗುಲ್ಬರ್ಗ ವಿಶ್ವವಿದ್ಯಾಲಯ ಬೋಧಕರ ಕೊರತೆಯಿಂದ ನಲುಗಿದೆ. ೨೬೮ಕ್ಕೂ ಹೆಚ್ಚಿನ ಹುದ್ದೆ ಖಾಲಿ ಇವೆ. ಹುದ್ದೆ ಭರ್ತಿ ಮಾಡದ ಕಾರಣ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಉಪನ್ಯಾಸಕರು ಇತರ ಸಿಬ್ಬಂದಿ ನೇಮಿಸಿಕೊಂಡು  ನಾಮ್‌ಕೇವಾಸ್ತೆ ಎಂಬAತೆ ವಿವಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದೆ. ದೀರ್ಘ ಕಾಲದಿಂದ ಹುದ್ದೆಗಳು ಖಾಲಿ ಉಳಿದಿದ್ದರಿಂದ ಗುಣಾತ್ಮಕ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದರೂ ಸರ್ಕಾರ ಹುದ್ದೆ ಭರ್ತಿಯತ್ತ ಗಮನಹರಿಸುತ್ತಿಲ್ಲ. ಸಂವಿಧಾನದ ೩೭೧(ಜೆ) ಅಡಿ ನೇಮಕಕ್ಕೆ ಅವಕಾಶ ಇರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಲಿವೆ. ಆದರೆ ಈ ಕೆಲಸವೂ ಆಗುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಕರೆದಿದ್ದ ಕೆಲ ಹುದ್ದೆಗಳ ಭರ್ತಿ ಪ್ರಕ್ರಿಯೆ ಸಹ ನನೆಗುದಿಗೆ ಬಿದ್ದಿದೆ.


ಗೊಂದಲದಲ್ಲೇ ಔಟರ್ ರಿಂಗ್ ರೋಡ್
ಕಲಬುರಗಿ ಔಟರ್ ರಿಂಗ್ ರೋಡ್ ಗೊಂದಲದ ಗೂಡಾಗಿದೆ. ಕೇಂದ್ರ ಹೆದ್ದಾರಿ ಸಚಿವಾಲಯ ಇದಕ್ಕೆ ಒಪ್ಪಿಗೆ ನೀಡಿತ್ತು. ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಮೀನು ಗುರುತಿಸಿದ್ದರು. ಆದರೆ ನಂತರ ಕೇಂದ್ರ ಸರ್ಕಾರ ಅನಾಸಕ್ತಿ ತಾಳಿದ್ದರಿಂದ ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜನಸಂಖ್ಯೆ, ವಾಹನ ಸಂಚಾರ ಹೆಚ್ಚಾದ ಕಾರಣ ಔಟರ್ ರಿಂಗ್ ರೋಡ್ ತೀರ ಅಗತ್ಯವಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೆ ಇದಕ್ಕೆ ಸಮ್ಮತಿಸುವ ಅಭಯ ನೀಡಿದೆ. ರಾಜ್ಯ ಸರ್ಕಾರ ಆಸಕ್ತಿ ವಹಿಸಿ ಕೇಂದ್ರದ ಜತೆ ಸಮನ್ವಯ ಸಾಧಿಸಿದರೆ ಯೋಜನೆ ಬೇಗ ಕಾರ್ಯಗತವಾಗಬಹುದು. ರಾಜ್ಯ ಸರ್ಕಾರ ಆದ್ಯತೆ ಮೇಲೆ ಭೂಸ್ವಾಧೀನ ಸೇರಿ ತನ್ನ ಪಾಲಿನ ಕೆಲಸ ಬೇಗ ಮುಗಿಸಲು ಮುಂದಾಗಬೇಕು.


ವರ್ಷಕ್ಕೊಮ್ಮೆ ನಡೆಯಲಿ ಕ್ಯಾಬಿನೆಟ್ ಸಭೆ
ಕಲ್ಯಾಣ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿವೆ. ಹಲವು ಸಮಸ್ಯೆಗಳಿಗೆ ದಶಕಗಳಿಂದಲೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ಈ ಭಾಗದ ಸಮಸ್ಯೆ ನಿವಾರಣೆಗಾಗಿ ವಿಶೇಷ ಮುತುವರ್ಜಿ ವಹಿಸಬೇಕು. ಪ್ರಮುಖ ಸಮಸ್ಯೆಗಳ ಪಟ್ಟಿ ಮಾಡಿ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಬೇಕು. ವರ್ಷಕ್ಕೊಮ್ಮೆಯಾದರೂ ಈ ಭಾಗದ ಕಲಬುರಗಿ ಅಥವಾ ಬೇರೆ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಎಲ್ಲ ಸಮಸ್ಯೆಗಳ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ೧೨ ವರ್ಷಗಳ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಒಮ್ಮೆ ಸಚಿವ ಸಂಪುಟ ಸಭೆ ನಡೆದಿತ್ತು. ಅದನ್ನು ಬಿಟ್ಟರೆ ಬರೀ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ವರ್ಷಕ್ಕೊಮ್ಮೆ ಕ್ಯಾಬಿನೆಟ್ ಸಭೆ ನಡೆಸಲಿ ಎಂಬುದು ಸ್ಥಳೀಯರ ಜನಾಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net