ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ

8
Published on

ರಾಮನಗರ : ತಾಲೂಕಿನ ಹರೀಸಂದ್ರ ಗ್ರಾಮದ ಬಳಿ ಒಣ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಭೂಮಿ ಪೂಜೆಗೆ ಬುಧವಾರ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಪಸ್ಸಾದರು.

ಹರೀಸಂದ್ರ ಸರ್ವೇ ನಂ. 166 ರಲ್ಲಿ 9.38 ಎಕರೆ ಗೋಮಾಳವನ್ನು ರಾಮನಗರ ನಗರಸಭೆಗೆ ಒಣತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಅಲ್ಲಿ ನಗರಸಭೆ ಬುಧವಾರ ಸ್ವಚ್ಛ ಭಾರತ್ ಅಭಿಯಾನ 2.0 ಯೋಜನೆಯಲ್ಲಿ ಕಸ ವಿಲೇವಾರಿ ಘಟಕದ ಪ್ರಥಮ ಮತ್ತು ದ್ವಿತೀಯ ಹಂತದ ಘಟಕ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಹರೀಸಂದ್ರ ಮತ್ತು ಸುತ್ತಮುತ್ತಲಿನ ರೈತರು, ಸಾರ್ವಜನಿಕರು, ಮಹಿಳೆಯರು ಘಟಕ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದರು.

ಪಕ್ಕದಲ್ಲೇ ನೀರಿನ ಹಳ್ಳ ಹರಿಯುತ್ತಿದ್ದು, ಅರ್ಕಾವತಿ ನದಿ ಸೇರುತ್ತದೆ. ಇದರಿಂದ ನದಿ ನೀರು ಕಲುಷಿತಗೊಳ್ಳುತ್ತದೆ. ಅಕ್ಕಪಕ್ಕದ ಗುಡ್ಡ-ಬೆಟ್ಟ ಪ್ರದೇಶದಲ್ಲಿ ವನ್ಯ ಪ್ರಾಣಿಗಳು ಇರುವುದರಿಂದ ಅವುಗಳ ಪ್ರಾಣಕ್ಕೂ ಸಂಚಕಾರ ಉಂಟಾಗುತ್ತದೆ. ಅಕ್ಕಪಕ್ಕದ ಗ್ರಾಮಗಳಲ್ಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಮಾಳ ಜಮೀನಿನಲ್ಲಿ 60 ವರ್ಷದಿಂದ ವ್ಯವಸಾಯ ಮಾಡುತ್ತಾ ಮಾವು ಬೆಳೆಸಲಾಗಿದೆ. ಭೂಮಿ ಒಡೆತನಕ್ಕಾಗಿ ಅರ್ಜಿ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಬೇಡ ಎಂದು ಪಟ್ಟು ಹಿಡಿದರು.

 ಪ್ರಯತ್ನ : ಬೆಂಗಳೂರಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಘಟಕಗಳು ಅಪಾರ್ಟ್‌ಮೆಂಟ್‌ಗಳಲ್ಲೇ ನಡೆಯುತ್ತಿವೆ, ವಾಸನೆ ಇಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್, ನಗರಸಭಾ ಅಧ್ಯಕ್ಷ ಕೆ. ಶೇಷಾದ್ರಿ ಜನರ ಮನವೊಲಿಕೆ ಮಾಡಲು ಮುಂದಾದರಾದರೂ ಪ್ರಯತ್ನ ವಿಫಲವಾಯಿತು. ಜನರ ವಿರೋಧ ಹೆಚ್ಚಾದ ಹಿನ್ನಲೆಯಲ್ಲಿ ಪೂಜೆ ನಿಲ್ಲಿಸಿ ಸ್ಥಳದಿಂದ ವಾಪಸ್ ತೆರಳಿದರು.

ವೈಜ್ಞಾನಿಕ ರೀತಿ ವಿಲೇ : ಹರೀಸಂದ್ರದ ಬಳಿ ಯಾವುದೇ ಕಸ ಹಾಕುವುದಿಲ್ಲ. ವೈಜ್ಞಾನಿಕ ರೀತಿಯಲ್ಲಿ ಬೃಹತ್ ಯಂತ್ರಗಳ ಮೂಲಕ ನೆಲಕ್ಕೆ ಕಸ ಬೀಳದಂತೆ ವಿಲೇವಾರಿ ಮಾಡಿ ಅಲ್ಲೇ ಗೊಬ್ಬರ ಮಾಡಿ ಚೀಲಕ್ಕೆ ತುಂಬಿ ಮಾರಾಟ ಮಾಡಬಹುದಾದ ಘಟಕ ಇದಾಗಿದೆ. ರೈತರ ಜಮೀನಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ, ಎಸಿ. ತಹಸೀಲ್ದಾರ್ ಬಳಿ ಚರ್ಚಿಸಿ ತೊಂದರೆಯಾಗದಂತೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಬೆಂಗಳೂರಿನ ಅಪಾರ್ಟ್‌ಮೆಂಟ್ ಇನ್ನಿತರ ಕಡೆ ನಡೆಯುತ್ತಿರುವ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ಬಳಿ ಇಲ್ಲಿನ ಗ್ರಾಪಂ ವ್ಯಾಪ್ತಿಯು ಸದಸ್ಯರು, ಮುಖಂಡರನ್ನು ಕರೆದುಕೊಂಡು ಹೋಗಿ ಅಲ್ಲಿನ ಘಟಕಗಳ ಕಾರ್ಯಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಕಸ ಘಟಕ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗ ಹಸಿರು ಪ್ರದೇಶದ ಗೋಮಾಳ. ಇಲ್ಲಿ 60 ರಿಂದ 70 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಹಕ್ಕು ಪತ್ರಕ್ಕಾಗಿ ಅರ್ಜಿ ಹಾಕಿದ್ದಾರೆ. ಇಲ್ಲಿ ಘಟಕ ನಿರ್ಮಾಣದಿಂದ ಕೆಟ್ಟ ವಾಸನೆ ಬಂದು ಇಡೀ ಗ್ರಾಮ ಅಕ್ಕಪಕ್ಕದ ಗ್ರಾಮಗಳ ಪರಿಸರ ಹಾಳಾಗುತ್ತದೆ. ಇಲ್ಲಿ ಮಾಡುವ ವೈಜ್ಞಾನಿಕ ಘಟಕವನ್ನು ಬೇರೆ ಕಡೆ ಮಾಡಲಿ. ಪ್ರವೀಣ್‌ಗೌಡ, ಗ್ರಾಪಂ ಸದಸ್ಯ ಪರಿಸರಕ್ಕೆ ವಾಸನೆ ತೊಂದರೆ ಇಲ್ಲದಂತೆ ಕಸ ನೆಲಕ್ಕೆ ಬೀಳದಂತೆ ವೈಜ್ಞಾನಿಕ ರೀತಿಯಲ್ಲಿ ಕಸ ಸಂಸ್ಕರಣೆ ಮಾಡುವ ಘಟಕ ಇದಾಗಿದೆ. ಜನರು ತಿಳಿವಳಿಕೆ ಕೊರತೆಯಿಂದ ಭೂಮಿ ಪೂಜೆಗೆ ಅವಕಾಶ ನೀಡಿಲ್ಲ. ನನಗೂ ಜನರನ್ನು ಎದುರು ಹಾಕಿಕೊಂಡು ಪೂಜೆ ನಡೆಸಲು ಮನಸ್ಸು ಇಲ್ಲ. ಎಚ್.ಎ. ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net