ಕಲ್ಯಾಣ ಪ್ರಗತಿ ೧೪ರಂದು ಸಿಎಂ ನೇತೃತ್ವದಲ್ಲಿ ಸಭೆ : ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಹೇಳಿಕೆ

IMG-20240612-WA0031
Published on

ನೀಟ್ ಪರೀಕ್ಷೆ ವ್ಯಾಪ್ತಿಯಿಂದ ಕರ್ನಾಟಕ ಹೊರ ಬರುವಂತೆ ಮುಖ್ಯಮಂತ್ರಿಗಳ ಮೇಲೆ ಎಲ್ಲರು ಸೇರಿ ಒತ್ತಡ ಹೇರುತ್ತೇವೆ

ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟಕ್ಕೆ ಆಕ್ರೋಶ : ನೀಟ್ ಮರು ಪರೀಕ್ಷೆ ನಡೆಸಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಹಾಕಿಕೊಳ್ಳಬೇಕಾಗಿರುವ ಪ್ರಗತಿ ಯೋಜನೆಗಳ ಮತ್ತು ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜೂ.೧೪ರಂದು ಬೆಳಗ್ಗೆ ೧೦ ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಶಾಸಕ ಡಾ.ಅಜಯಸಿಂಗ್ ಧರ್ಮಸಿಂಗ್ ತಿಳಿಸಿದರು.
ನಗರದ ಅಭಿವೃದ್ಧಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೆಕೆಆರ್‌ಡಿಬಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಿಎಂ ನಡೆಸಲಿದ್ದಾರೆ. ಎಲ್ಲ ಸಚಿವರು ಹಾಗೂ ಯೋಜನೆ ಇನ್ನಿತರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಲ್ಯಾಣದಲ್ಲಿ ಪ್ರಗತಿ ಪರ್ವ ಮಾಡಲು ಸಿಎಂ ಪ್ಲಾನ್ ಮಾಡಿದ್ದಾರೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಈ ಭಾಗದ ಐದು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದರಿಂದ ಇನ್ನೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗುತ್ತಿದೆ.
ಕೆಕೆಆರ್‌ಡಿಬಿಗೆ ಈಗಾಗಲೇ ೩೦೦೦ ಕೋ.ರೂ.ಬಿಡುಗಡೆ ಮಾಡಿದ್ದು, ಅದನ್ನು ಆಗಷ್ಟ ಅಂತ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಉಳಿದಂತೆ ಇನ್ನೂ ೨ ಸಾವಿರ ಕೋ.ರೂ.ಸಹ ಬಿಡುಗಡೆ ಮಾಡುವಂತೆ ಕೋರಲಾಗುವುದು. ಶಿಕ್ಷಣ ಆರೋಗ್ಯ ಜತೆಗೆ ಕೃಷಿ ಇನ್ನಿತರ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ಮಂಡಳಿ ನೀಡಲಿದೆ ಎಂದು ಅಜಯಸಿಂಗ್ ತಿಳಿಸಿದರು.
ನೀಟ್ ಮರುಪರೀಕ್ಷೆ ನಡೆಸಿ
ವೈದ್ಯಕೀಯ (ಮೆಡಿಕಲ್) ಕಲಿಕೆಗೆ ನಡೆಸುವ ಅರ್ಹತಾ ಪರೀಕ್ಷೆ ನೀಟ್‌ನಲ್ಲಿ ಅಪರ್‌ತಫರಾ ಆಗಿರುವುದು ಬೆಳಕಿಗೆ ಬಂದಿದೆ. ಅಕ್ರಮ ನಡೆಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಒಂದೇ ರಾಜ್ಯದ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಮೊದಲಿನ ಪರೀಕ್ಷೆ ರದ್ದುಪಡಿಸಿ, ನೀಟಾಗಿ ಮರು ಪರೀಕ್ಷೆ ನಡೆಸಬೇಕು. ಸೂಕ್ತ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಜಯಸಿಂಗ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.


ಮಂತ್ರಿ ಸ್ಥಾನದ ಆಕಾಂಕ್ಷಿ
ನಾನು ೨೦೧೮ರಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿz್ದೆÃನೆ. ಒಂದು ವೇಳೆ ಸಚಿವ ಸಂಪುಟ ಪುನಾರಚನೆಯಾದರೆ, ಅವಕಾಶ ಸಿಗುವ ವಿಶ್ವಾಸವಿದೆ. ಪಕ್ಷದ ವರಿಷ್ಠರು ಹಾಗೂ ಸಿಎಂ ನೀಡುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವೆ. ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಿ ನಿರ್ಧರಿಸುತ್ತಾರೆ ಎಂದು ಅಜಯಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

------
ವೈದ್ಯಕೀಯ ಕಲಿಯುವ ಕನಸು ಹೊತ್ತ ವಿದ್ಯಾರ್ಥಿಗಳ ಜತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ನೀಟ್ ಪರೀಕ್ಷೆ ವ್ಯಾಪ್ತಿಯಿಂದ ಕರ್ನಾಟಕ ಹೊರ ಬರುವಂತೆ ಮುಖ್ಯಮಂತ್ರಿಗಳ ಎಲ್ಲರು ಸೇರಿ ಒತ್ತಡ ಹಾಕುತ್ತೇವೆ.ಎಐಸಿಸಿ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಮತ್ತು ದೇಶವ್ಯಾಪಿಯಾಗಿ ಐಎನ್‌ಡಿಐಎ ಮೈತ್ರಿಕೂಟದಿಂದ ಹೋರಾಟ ರೂಪಿಸುವ ಕುರಿತು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೋರುವೆ.
| ಡಾ.ಅಜಯಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net