ಸುಳ್ಳನ್ನು ನಿಜ ಮಾಡಲು ಸಾಧ್ಯವಿಲ್ಲ

kj j
Published on

ರಾಮನಗರ : ಯೋಗೇಶ್ವರ್ ಬಿಜೆಪಿಯವರಿಂದ ಮೋಸ ಹೋಗಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಳಿತಾಗುತ್ತದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನೂರು ಸುಳ್ಳು ಹೇಳಿ ಮುಖ್ಯಮಂತ್ರಿ ವಿರುದ್ಧ ವಾಡುತ್ತಿರುವ ಸುಳ್ಳು ಆರೋಪವನ್ನು ನಿಜ ಮಾಡಲು ಸಾಧ್ಯವಿಲ್ಲ. ಮುಡಾ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಪತ್ನಿಯ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಬಿಜೆಪಿಯವರು ನೂರು ಸುಳ್ಳು ಪೋಣಿಸಿದರೂ ಅದನ್ನು ಸತ್ಯ ಎಂದು ರುಜುವಾತು ಮಾಡಲಾಗದು ಎಂದು ಹೇಳಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ನಾವು ಆರ್ಥಿಕವಾಗಿ ದಿವಾಳಿಯಾಗುತ್ತೇವೆ ಎಂಬ ಪ್ರತಿಪಕ್ಷಗಳ ದುರಾಲೋಚನೆ ಸುಳ್ಳಾಗಿದೆ. ಕರ್ನಾಟಕ ಆರ್ಥಿಕವಾಗಿ ಸದಢವಾಗಿದೆ. ಇತ್ತೀಚಿನ ವರದಿಯಿಂದ ಅದು ಸಾಬೀತು ಆಗಿದೆ. ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕವು ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, 1,03,683 ಕೋಟಿ ರೂ. ಆದಾಯ ಸಂಗ್ರಹ ವಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಹಲವು ಜನಪರ ಯೋಜನೆಗಳು ಹಾಗೂ ಅಭಿವದ್ಧಿಯ ಫಲ ಎಲ್ಲವರ್ಗಗಳಿಗೂ ತಲುಪಿರುವುದನ್ನು ಇದು ಖಾತರಿಪಡಿಸಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸಾವಾಜಿಕ ಪ್ರಗತಿಯನ್ನು ಒಂದುಗೂಡಿಸುವ ’ಕರ್ನಾಟಕದ ಆರ್ಥಿಕ ಮಾದರಿ’ಯ ಯಶಸ್ಸನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಕನ್ಯಾಕುವಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ಸರ್ವಜನಾಂಗದವರನ್ನು ಭೇಟಿ ವಾಡಿ ಕಷ್ಟ ಸುಖಗಳನ್ನು ಆಲಿಸಿದರು. ಪಾದಯಾತ್ರೆ ವೇಳೆ ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳನ್ನು ಕಂಡು, ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದರು. ಹೀಗಾಗಿ ಪಂಚಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಯೋಗೇಶ್ವರ್ ಪರವಾಗಿ ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಕಷ್ಣಪ್ಪ, ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಕಾಂಗ್ರೆಸ್ ನಾಯಕರಾದ  ಕೆ.ಪಿ.ನಂಜುಂಡಿ ಸೇರಿ ಅನೇಕ ನಾಯಕರು ಚನ್ನಪಟ್ಟಣ ನಗರದ ನಾನಾ ವಾರ್ಡ್‌ಗಳಲ್ಲಿ ಮತಪ್ರಚಾರದಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net