

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಮನೆ ನಿರ್ಮಾಣದಲ್ಲಿ ವಿನ್ಯಾಸದ ಜತೆಗೆ ವಾಸ್ತು ಪ್ರಮುಖ ಪಾತ್ರ ವಹಿಸುತ್ತಿದೆ. ಸರಿಯಾದ ದಿಕ್ಕಿನಲ್ಲಿ ಮಾಡಿದ ಕೆಲಸ ಯಶಸ್ಸು ಮತ್ತು ಪ್ರಗತಿಯತ್ತ ಕೊಂಡೊಯುತ್ತವೆ ಎಂಬುದು ನಂಬಿಕೆ. ಅದಕ್ಕೆ ಪೂರಕವಾಗಿ ವಾಸ್ತು ಬೇಡಿಕೆ ಪಡೆದುಕೊಂಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಹೊಸ ಮನೆ ಕಟ್ಟಿದ ನಂತರ ಯಾವುದೇ ಯಶಸ್ಸು ಕಾಣದಿದ್ದರೆ, ಬಾಡಿಗೆ ಇರುವವರು ಬೇರೆ ಮನೆಗೆ ಹೋದ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಹೊಂದದಿದ್ದರೆ ಮೊದಲು ಚರ್ಚೆಗೆ ಬರುವ ವಿಷಯವೇ ಮನೆ ವಾಸ್ತು. ವಾಸ್ತು ಪ್ರಕಾರ ಮನೆ ಇಲ್ಲದಿದ್ದರೆ ಬಾಡಿಗೆದಾರರೂ ಹಿಂದೆ ಸರಿಯುತ್ತಾರೆ. ಹಾಗಾಗಿ ಕೇವಲ ಸ್ವಂತ ಮನೆ ಅಷ್ಟೇ ಅಲ್ಲದೆ ಬಾಡಿಗೆಗೆ ಕೊಡುವ ಮನೆಗಳನ್ನೂ ವಾಸ್ತು ಪ್ರಕಾರವೇ ಕಟ್ಟಿಸಲಾಗುತ್ತಿದೆ. ಕೇವಲ ಮನೆ ಮಾತ್ರವಲ್ಲ, ಯಾವುದೇ ಕಟ್ಟಡ ನಿರ್ಮಾಣಕ್ಕೂ ವಾಸ್ತು ನೋಡುವುದು ಹೆಚ್ಚಾಗಿದೆ.
ವಾಸ್ತು ಪ್ರಕಾರ ಮನೆ ನಿರ್ಮಿಸಿದರೆ ಸಂತೋಷ, ಸಮೃದ್ಧಿ ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದು ನಂಬಿಕೆ. ಆದ್ದರಿಂದ ವಾಸ್ತು ಪ್ರಕಾರ ಮನೆ ನಿರ್ಮಿಸಿ. ಅದರಲ್ಲೂ ಪ್ರಮುಖವಾಗಿ ಅಡುಗೆ ಮನೆ ವಾಸ್ತು ಪ್ರಕಾರ ಇದ್ದರೆ ಅದರಿಂದ ಆರೋಗ್ಯದ ಜತೆಗೆ ಅದೃಷ್ಟವೂ ಲಭಿಸುತ್ತದೆ ಎಂದು ವಾಸ್ತುಶಾಸ ಹೇಳುತ್ತದೆ.
ಇಡೀ ಕುಟುಂಬಕ್ಕೆ ಅಗತ್ಯವಾದ ಆಹಾರ ತಯಾರಿಸುವ ಸ್ಥಳ ಅಡುಗೆ ಮನೆ. ಹಾಗಾಗಿ ಸೇವಿಸುವ ಆಹಾರವನ್ನು ಸರಿಯಾದ ದಿಕ್ಕಿನಲ್ಲಿ ತಯಾರಿಸಿದರೆ, ಇಡೀ ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ. ಎಲ್ಲರೂ ಆರೋಗ್ಯವಾಗಿದ್ದರೆ ನೆಮ್ಮದಿ, ಸಂತೋಷ, ಅದೃಷ್ಟ ತಾನಾಗಿಯೇ ಬರುತ್ತದೆ. ಹಾಗಾಗಿ ಅಡುಗೆ ಮನೆಯನ್ನು ನಿರ್ಮಿಸುವಾಗ ಕೆಲ ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವಾಸ್ತು ತಜ್ಞರು.
ದಕ್ಷಿಣ ದಿಕ್ಕಿನ ಬಗ್ಗೆ ಗಮನವಿರಲಿ:
ಯಾವುದೇ ಮನೆಯನ್ನು ನಿರ್ಮಿಸುವಾಗ, ಅಡುಗೆ ಮನೆಯನ್ನು ಆಗ್ನೇಯ ಕೋನದಲ್ಲಿ ಅಂದರೆ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ನಿರ್ಮಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅಡುಗೆ ಮನೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಾರದು. ಅಡುಗೆ ಮನೆಯಲ್ಲಿ ಅಡುಗೆ ತಯಾರಿಸುವವರು ಯಾವಾಗಲೂ ಪೂರ್ವ ದಿಕ್ಕಿನೆಡೆಗೆ ಮುಖ ಮಾಡಿರಬೇಕು. ಅಲ್ಲದೆ, ಅಡುಗೆ ತಯಾರಿಸುವವರ ಬೆನ್ನು ಅಡುಗೆ ಮನೆಯ ಬಾಗಿಲಿನ ಕಡೆಗೆ ಇರಬಾರದು. ಅಡುಗೆ ತಯಾರಿಸುವಾಗ ಯಾವಾಗಲೂ ಈ ಸಂಗತಿ ನೆನಪಿನಲ್ಲಿರಬೇಕು. ಅಪ್ಪಿತಪ್ಪಿಯೂ ಕೂಡ ಅಡುಗೆ ಮನೆಯ ಮಧ್ಯಭಾಗದಲ್ಲಿ ಅಡುಗೆ ಒಲೆಯನ್ನು ಇಡಬಾರದು. ಅಡುಗೆ ಒಲೆ ಇರಿಸಿದ ಸ್ಥಳದ ಮೇಲೆ ಬೀಮ್ ಇರಬಾರದು. ಬೀಮ್ ಕೆಳಗೆ ಆಹಾರ ಬೇಯಿಸಲೂ ಬಾರದು ಹಾಗೂ ಆಹಾರ ಸೇವಿಸಲೂ ಬಾರದು.
ಅಡುಗೆ ಮನೆಯಲ್ಲಿರುವ ಒಲೆ ಧನ ಹಾಗೂ ಸಮೃದ್ಧಿಯ ಪ್ರತೀಕವಾಗಿರುತ್ತದೆ. ಹಾಗಾಗಿ ಒಲೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಒಲೆಯ ಹತ್ತಿರ ನೀರು ಇಡಬಾರದು.
ಮೆಟ್ಟಿಲ ಕೆಳಗೆ ಬೇಡ:
ಮೆಟ್ಟಿಲುಗಳ ಕೆಳಗೆ ಅಪ್ಪಿತಪ್ಪಿಯೂ ಅಡುಗೆ ಮನೆ ನಿರ್ಮಿಸಬೇಡಿ. ಮೆಟ್ಟಿಲುಗಳ ಕೆಳಭಾಗದಲ್ಲಿ ಅಡಿಗೆಮನೆ ಇದ್ದರೆ ಅದು ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ. ಹಾಗೆಯೇ ಅಡುಗೆ ಮನೆ ಮತ್ತು ಶೌಚಗೃಹ ಅಕ್ಕಪಕ್ಕ ನಿರ್ಮಿಸಬಾರದು. ಅಡುಗೆಮನೆ ಮತ್ತು ಶೌಚಾಲಯದ ಗೋಡೆಗಳು ಒಂದಕ್ಕೊಂದು ಹೊಂದಿಕೊಂಡಿರಬಾರದು. ಈ ಬಗ್ಗೆ ಗಮನ ಹರಿಸಬೇಕು.
ಒಡೆದ ಪಾತ್ರೆಗಳ ಬಳಕೆ ಮಾಡಬೇಡಿ:
ಅಡಿಗೆಮನೆ ತಾಯಿ ಅನ್ನಪೂರ್ಣೆಯ ಸ್ಥಾನವಾಗಿರುತ್ತದೆ. ಹಾಗಾಗಿ ಎಂತಹ ಪರಿಸ್ಥಿತಿಯಲ್ಲೂ ಈ ಸ್ಥಳದ ಪಾವಿತ್ರ್ಯತೆ ಹಾಳಾಗದಂತೆ ನೋಡಿಕೊಳ್ಳಬೇಕು. ಬೆಳಗ್ಗೆ ಮುಖ ತೊಳೆಯದೆ ಅಡುಗೆ ಮನೆಗೆ ಪ್ರವೇಶಿಸಬಾರದು. ಒಲೆಯನ್ನು ನಿತ್ಯ ಒರೆಸಿ ಅರಿಶಿನ ಕುಂಕುಮ ಇಟ್ಟು ನಂತರ ಒಲೆ ಉರಿಸಿ. ಒಡೆದ ಪಾತ್ರೆಗಳು ಅಥವಾ ಅನುಪಯುಕ್ತ ಕಸದಂತಹ ವಸ್ತುಗಳನ್ನು ಹಾಗೂ ಔಷಧಗಳನ್ನು ಅಡುಗೆಮನೆಯಲ್ಲಿ ಇಡಬಾರದು.