ಕಿಷ್ಕಿಂದಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಾರಣ ಬಳಗದಿಂದ ಸಚಿವ ತಂಗಡಗಿಗೆ ಮನವಿ

Gangavati Charana Balaga Appeal to Tangadagi
ಆನೆಗೊಂದಿ ಮತ್ತು ಅಂಜನಾದ್ರಿ ಬೆಟ್ಟದ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗಾಗಿ ಕಿಷ್ಕಿಂದಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಗ್ರಹಿಸಿ ಗಂಗಾವತಿ ಚಾರಣ ಬಳಗದ ಕಾರ್ಯಕರ್ತರು ಸಚಿವ ಶಿವರಾಜ ತಂಗಡಗಿಗೆ ಮಂಗಳವಾರ ಮನವಿ ಸಲ್ಲಿಸಿದರು.
Published on

ಗಂಗಾವತಿ: ಆನೆಗೊಂದಿ ಮತ್ತು ಅಂಜನಾದ್ರಿ ಬೆಟ್ಟದ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗಾಗಿ ಕಿಷ್ಕಿಂದಾ ಅಭಿವೃದ್ಧಿ ಪ್ರಾಧಿಕಾರ ರಚನೆ ಕೋರಿ ಗಂಗಾವತಿ ಚಾರಣ ಬಳಗದ ಕಾರ್ಯಕರ್ತರು ಸಚಿವ ಶಿವರಾಜ ತಂಗಡಗಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕಾರಟಗಿಯ ಗೃಹ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಸದಸ್ಯರು, ಗಂಗಾವತಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಕಿಷ್ಕಿಂದಾ ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದರು.

ಹಿರೇಬೆಣಕಲ್ ಮೊರೇರ ಬೆಟ್ಟದ ಸಂಪರ್ಕ ರಸ್ತೆ ನಿರ್ಮಾಣ, ಕುಡಿವ ನೀರಿನ ವ್ಯವಸ್ಥೆ , ರಕ್ಷಣಾ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮರಾ ಅಳವಡಿಕೆ, ಜಬ್ಬಲಗುಡ್ಡದ ಬಳಿ ಗಂಡುಗಲಿ ಕುಮಾರರಾಮ ಬೆಟ್ಟಕ್ಕೆ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಬೆಟ್ಟದ ಪ್ರವೇಶ ದ್ವಾರದ ಬಳಿ ಮೂರ್ತಿ ಸ್ಥಾಪಿಸಬೇಕು. ಎಆರ್‌ಟಿಒ ಕಚೇರಿ ಆರಂಭ, ವಾಣಿಭದ್ರೇಶ್ವರ ದೇವಾಲಯದ ಮುಖ್ಯರಸ್ತೆ ದುರಸ್ತಿ, ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಈ ಕುರಿತು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿ, ಪ್ರಮುಖ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಕೆಪಿಸಿಸಿ ಮಾಧ್ಯಮ ವಕ್ತಾರೆ ಎಚ್.ಎಂ.ಶೈಲಜಾ, ಚಾರಣ ಬಳಗದ ಸದಸ್ಯರಾದ ಮಂಜುನಾಥ ಗುಡ್ಲಾನೂರ್, ಹರನಾಯಕ, ವೀರೇಶ ಅಂಗಡಿ ಬೆಣಕಲ್, ಪ್ರಹ್ಲಾದ್ ಕುಲಕರ್ಣಿ, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net