

ಮಂಜೇಶ್ವರ: ನಾಡೋಜ ಕಯ್ಯರ ಕಿಞ್ಞಣ್ಣ ರೈಗಳ ಬದುಕು ಬರಹ ವಿಸ್ತೃತ ಮಟ್ಟದಲ್ಲಿ ಬೆಳೆಯಲು ಅವರ ಬಾಲ್ಯ ಮತ್ತು ಕಲಿಕಾ ಕ್ಷೇತ್ರದಲ್ಲಿ ಗಾಢ ಪ್ರಭಾವ ಬೀರಿದ್ದ ಕಾಸರಗೋಡಿನ ಬಹುಭಾಷೆ, ಸಂಸ್ಕೃತಿ ಪ್ರಧಾನ ಕಾರಣವಾಗಿತ್ತು ಎಂದು ಬದಿಯಡ್ಕದ ಕವಿ ನಿಲಯ ಕವಿತಾ ಕುಟೀರದ ಕಾರ್ಯದರ್ಶಿ ಡಾ.ಪ್ರಸನ್ನ ರೈ ಹೇಳಿದರು.
ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಗಿಳಿವಿಂಡು ಮಂಜೇಶ್ವರ ಆಶ್ರಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಮಂಗಳವಾರ ಗಿಳಿವಿಂಡಲ್ಲಿ ನಡೆದ ನಾಡೋಜ ಕಿಞ್ಞಣ್ಣ ರೈ ಕೃತಿ-ಸ್ಮತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಮಾತನಾಡಿದರು. ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟಿನ ಕಾರ್ಯದರ್ಶಿ ನೇಮಿರಾಜ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಮಹಾಕವಿ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಉಮೇಶ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಕಯ್ಯರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.
ಗ್ರಂಥಾಲಯದ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಜಯಂತ ಮಾಸ್ತರ್ ವಂದಿಸಿದರು. ಗಾಯಕ ದಿವಾಕರ ಅಶೋಕ ನಗರ ಕಯ್ಯರರ ತುಳು ಕವನ ಹಾಡಿದರು.
ಮರು ಮುದ್ರಣದ ಹಕ್ಕು ಹಸ್ತಾಂತರ
ಕಯ್ಯರರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬಗೆಗೆ ಬರೆದು ಪ್ರಸ್ತುತ ಮುದ್ರಣದಲ್ಲಿಲ್ಲದ ಕೃತಿಯ ಮರು ಮುದ್ರಣಕ್ಕೆ ಕಯ್ಯರರ ಕುಟುಂಬ ಹಕ್ಕುಪತ್ರವನ್ನು ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಗಿಳಿವಿಂಡು ಸಂಸ್ಥೆಗೆ ಹಸ್ತಾಂತರಿಸಿದರು. ಉಮೇಶ್ ಎಂ.ಸಾಲ್ಯಾನ್ ಹಕ್ಕುಪತ್ರ ಸ್ವೀಕರಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನಿಂದ ಶೀಘ್ರ ಈ ಕೃತಿ ಮರುಮುದ್ರಣಗೊಂಡು ಓದುಗರ ಕೈಸೇರಲಿದೆ ಎಂದು ತಿಳಿಸಿದರು.