ಹಲವು ಪ್ರಥಮಗಳನ್ನು ನೀಡಿದ ದೊರೆ ನಾಲ್ವಡಿ

04-kkr1(6-24
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್ ವತಿಯಿಂದ ಮಂಗಳವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ನಡೆಯಿತು. ತ್ರಿವೇಣಿ, ಕವಿತಾ, ಸವಿತಾ ಮತ್ತಿತರರಿದ್ದರು.
Published on

ಕಿಕ್ಕೇರಿ: ಹಿಂದುಳಿದವರ ಧ್ವನಿಯಾಗಿ ಕಡ್ಡಾಯ ಉಚಿತ ಶಿಕ್ಷಣ, ಉದ್ಯೋಗ ಮೀಸಲಾತಿಯನ್ನು ರಾಜಪ್ರಭುತ್ವದಲ್ಲಿ ತಂದು ಹಲವು ಪ್ರಥಮಗಳ ಸರದಾರ ಆದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸ್ಪಂದನಾ ಫೌಂಡೇಷನ್ ತ್ರಿವೇಣಿ ತಿಳಿಸಿದರು.

ಇಲ್ಲಿನ ಸ್ಪಂದನಾ ಫೌಂಡೇಷನ್ ಮಂಗಳವಾರ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ಮಾತನಾಡಿ, ನಾಡು ಕಟ್ಟಿದ ದೊರೆಯಾಗಿ ಉತ್ತಮ ರಾಜಾಡಳಿತವನ್ನು ನಡೆಸಿದ ನಾಲ್ವಡಿ ಅವರ ಕಾರ್ಯದಕ್ಷತೆಯನ್ನು ಕಂಡ ಗಾಂಧೀಜಿ ಮೈಸೂರು ರಾಜ್ಯವನ್ನು ರಾಮರಾಜ್ಯವೆಂದು, ನಾಲ್ವಡಿಯವರಿಗೆ ರಾಜರ್ಷಿ ಎಂದರು. ಯದುವಂಶದ 24ನೇ ದೊರೆಯಾಗಿ ತಮ್ಮ 18ನೇ ವಯಸ್ಸಿನಲ್ಲಿ ರಾಜ್ಯದ ಸಿಂಹಾಸನ ಏರಿದರು. 1911ರಲ್ಲಿ ಕೆ.ಆರ್.ಸಾಗರ ಅಣೆಕಟ್ಟು ನಿರ್ಮಿಸಿ ಮೈಸೂರು ಪ್ರಾಂತ್ಯವನ್ನು ಹಸಿರುಮಯವಾಗಿಸಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ಕನ್ನಡ ಭಾಷೆ ಸಂಪತ್ತು ಗಟ್ಟಿಯಾಗಲು ನಾಲ್ವಡಿಯವರು ಕನ್ನಡ ಸಾಹಿತ್ಯ ಪರಿಷತ್ ಕಟ್ಟಿದರು. ಮೀಸಲಾತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಮಹಾರಾಣಿ ಕಾಲೇಜು ಸ್ಥಾಪಿಸಿದರು. ಶಿಕ್ಷಣ, ಕೈಗಾರಿಕೆ, ಬ್ಯಾಂಕಿಂಗ್, ಆರೋಗ್ಯ, ಉದ್ಯೋಗಕ್ಕಾಗಿ ನೀಡಿದ ಕೊಡುಗೆ ಹಲವಾರು. ವಾಣಿವಿಲಾಸ ಅಣೆಕಟ್ಟು, ಯುವರಾಜ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಶಿವನಸಮುದ್ರದಲ್ಲಿ ಜಲವಿದ್ಯುತ್, ಆರೋಗ್ಯಕ್ಕಾಗಿ ಕೆ.ಆರ್. ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆ, ಬಾಲ್ಯವಿವಾಹ ನಿಷೇಧ, ದೇವದಾಸಿ, ಗೆಜ್ಜೆಪೂಜೆ, ಬಸವಿ ಪದ್ಧತಿ ನಿಷೇಧ ಕಾಯ್ದೆ ಜಾರಿ, ವಿಧವಾ ಮರು ವಿವಾಹ, ಮಹಿಳೆಯರಿಗೆ ಮತದಾನದ ಹಕ್ಕು ಸ್ಥಾಪಿಸಿದರು ಎಂದರು.

ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಉದ್ಯೋಗದಲ್ಲಿ ಮೀಸಲಾತಿ, ಗ್ರಾಮ ನ್ಯಾಯಾಲಯ ಸ್ಥಾಪನೆ, ಮೈಸೂರು ರಾಜ್ಯದ ಹಲವು ರೈಲು ಮಾರ್ಗಗಳು ನಿರ್ಮಾಣವಾಗಿವೆ. ಇವರ ಆದರ್ಶದ ಬದುಕು ಎಳೆಯ ಮನಸ್ಸು, ಯುವಕರಿಗೆ ದಾರಿದೀಪವಾಗಿದೆ ಎಂದು ನುಡಿದರು.

ರಾಜರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗಿಡಕ್ಕೆ ನೀರೆರೆದು, ಒಡೆಯರ್ ಅವರಿಗೆ ಗೀತನಮನ ಸಲ್ಲಿಸಲಾಯಿತು. ಕವಿತಾ, ಸವಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net