ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸೆ

sss
Published on

ಬೆಂಗಳೂರು: ಕಿಂಡರ್ ಆಸ್ಪತ್ರೆಯು, ಆಪರೇಷನ್ ಸ್ಮೈಲ್ ಮತ್ತು ಇಂಗಾ ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ ದಿ ಫ್ಯೂಚರ್ ಆಫ್ ಸ್ಮೈಲ್ಸ್ ಮಿಷನ್ ಮೂಲಕ ರಾಜ್ಯದಲ್ಲಿ ಸೀಳು ತುಟಿ ಹೊಂದಿರುವ ನೂರಾರು ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

ಇದೀಗ ಅ. 7 ಮತ್ತು 8ರಂದು ನಗರದ ವೈಟ್‌ಫೀಲ್ಡ್ ನಲ್ಲಿರುವ ಕಿಂಡರ್ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಸುಳಿ ತುಟಿ ಹೊಂದಿರುವ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ, ಸ್ಪೀಚ್ ತೆರಪಿ, ಔಷಧವನ್ನು ಒದಗಿಸಲಿದೆ ಎಂದು ಕಿಮಡರ್ ಸಮೂಹದ ಸಿಇಒ ರಂಜಿತ್ ಕೃಷ್ಣನ್ ತಿಳಿಸಿದ್ದಾರೆ.

ನಗರದಲ್ಲಿ ಅ. 15ರವರೆಗೆ ನಡೆಯಲಿರುವ ದಿ ಫ್ಯೂಚರ್ ಆಫ್ ಸ್ಮೈಲ್ಸ್ ಮಿಷನ್ ಅಡಿಯಲ್ಲಿ 100 ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಆಪರೇಷನ್ ಸ್ಮೈಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಭಿಷೇಕ್ ಸೆನ್ ಗುಪ್ತ ಮಾತನಾಡಿ, ಈ ಮಿಷನ್‌ನಲ್ಲಿ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಶಿಶುವೈದ್ಯರು, ದಾದಿಯರು, ವಾಕ್ ಚಿಕಿತ್ಸಕರು ಸೇರಿ ಭಾರತದಾದ್ಯಂತ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂಸೇವಕರ ತಂಡ ಒಗ್ಗೂಡಿ ಕಾರ್ಯನಿರ್ವಹಿಸಲಿದೆ ಎಂದರು.

ಹುಟ್ಟುವಾಗಲೇ ಸೀಳು ತುಟಿ ಹೊಂದಿರುವ ಮಕ್ಕಳು ಸಾಮಾಜಿಕವಾಗಿ ಮುಜುಗರವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದರಿಂದ ಶಿಕ್ಷಣಿಕ ಹಿನ್ನಡೆಯೂ ಆಗಿರುತ್ತದೆ. ಒಂದು ಸರಳವಾದ ಶಸ್ತ್ರಚಿಕಿತ್ಸೆಯು ಇದಕ್ಕೆ ಪರಿಹಾರ ಒದಗಿಸಲಿದೆ. ಈ ಕಾರ್ಯದಲ್ಲಿ ಮಾಗಡಿ ರಸ್ತೆಯ ಶ್ರೀ ವಿನಾಯಕ ನರ್ಸಿಂಗ್ ಕಾಲೇಜಿನ ಸ್ವಯಂಸೇವಕರು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು. ವಿವರಕ್ಕೆ ದೂ: 98861 11275 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net