

ಮಂಗಳೂರು: ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ, ಅದಕ್ಕೊಪ್ಪದ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಜಿಲ್ಲಾ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಭದ್ರಾವತಿ ತ್ರಿಷಾಪುರ, ಪ್ರಸ್ತುತ ಸುರತ್ಕಲ್ ನಿವಾಸಿ ಮಜೀದ್ ಅಹಮ್ಮದ್(35), ಸಪೂರ್ ಅಂಜುಂ(28), ಮುಮ್ತಾಜ್ ಬಾನು(60), ಭದ್ರಾವತಿ ಹಳೇನಗರ ಕಾಜಿಮೊಹಲ್ ಜಮೀರ್ ಅಹಮದ್(30) ಶಿಕ್ಷೆಗೊಳಗಾದ ಅಪರಾಧಿಗಳು. ಚನ್ನಗಿರಿ ನಿವಾಸಿ ರೇಷ್ಮಾ ಬಾನು(26) ಕೊಲೆಯಾದವರು.
ಒಂದನೇ ಆರೋಪಿ ಮಜೀದ್ ಅಹಮ್ಮದ್ 2018ರ ಅ.8ರಂದು ಚಿತ್ರದುರ್ಗ ಜಿಲ್ಲೆಯ ಕೊಳಲ್ಕೆರೆ ಮಸೀದಿಯಲ್ಲಿ ಚನ್ನಗಿರಿ ನಿವಾಸಿ ರೇಷ್ಮಾ ಬಾನು ಎಂಬುವರನ್ನು ಎರಡನೇ ವಿವಾಹವಾಗಿದ್ದನು. ಮದುವೆ ಸಂದರ್ಭ ರೇಷ್ಮಾ ಬಾನು ತಂದೆ ನಜೀರ್ ಅವರು ಚಿನ್ನಾಭರಣ, ಪೀಠೋಪಕರಣಗಳನ್ನು ವರದಕ್ಷಿಣೆ ನೀಡಿದ್ದರು. ಮದುವೆಯಾದ ಬಳಿಕ ದಂಪತಿ ಮಂಗಳೂರಿಗೆ ಆಗಮಿಸಿ ಕಾಟಿಪಳ್ಳ 9ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಜೀದ್ ಅಲ್ಲೇ ಸಮೀಪ ಗ್ಯಾರೇಜ್ ಇಟ್ಟುಕೊಂಡಿದ್ದನು. ಸುರತ್ಕಲ್‌ಗೆ ಬಂದ ಬಳಿಕ ಆತನ ಮೊದಲ ಪತ್ನಿ ಸಪೂರ್ ಅಂಜುಂ, ಆತನ ತಾಯಿ ಮುಮ್ತಾಜ್, ಸಪೂರ್‌ನ ಸಹೋದರ ಜಮೀರ್ ಅಹಮದ್ ಕೂಡ ಅದೇ ಮನೆಗೆ ಬಂದು ವಾಸ್ತವ್ಯ ಆರಂಭಿಸಿದ್ದರು.
ಮದುವೆಯಾದ ಕೆಲವೇ ತಿಂಗಳಲ್ಲಿ ನಾಲ್ವರು ಅಪರಾಧಿಗಳು ಸೇರಿ ರೇಷ್ಮಾಗೆ ಹೆಚ್ಚಿನ ವರದಕ್ಷಿಣೆ ತರಲು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಇದಕ್ಕೆ ಒಪ್ಪದ ಕಾರಣ 2019ರ ಏ.28ರಂದು ಮಧ್ಯಾಹ್ನ ರೇಷ್ಮಾ ಕೊಠಡಿಯಲ್ಲಿ ಮಲಗಿದ್ದಾಗ ಆರೋಪಿ ಮಜೀದ್ ತಲೆದಿಂಬುವಿನಿಂದ ಉಸಿರುಗಟ್ಟಿಸಿ ಅಸ್ವಸ್ಥಗೊಳಿಸಿದ್ದನು. ಬಳಿಕ ನಾಲ್ವರು ಸೇರಿ ಚೂಡಿದಾರದ ಶಾಲ್‌ನಿಂದ ಕುತ್ತಿಗೆಗೆ ಸುತ್ತಿ ನೇಣಿಗೆ ಹಾಕಿ ಹತ್ಯೆಗೈದಿದ್ದರು. ಸುರತ್ಕಲ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜ ಎಸ್.ವಿ. ಸಮಗ್ರ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಜ್ಯೋತಿ ಬಿ.ನಾಯಕ್ ಮತ್ತು ಬಿ.ಶೇಖರ್ ಶೆಟ್ಟಿ ಮಾಡಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು.