

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ನಿಯೋಜಿಸಿದ್ದ ಆಡಳಿತಾಧಿಕಾರಿಯನ್ನು ಹಿಂಪಡೆಯಲಾಗಿದ್ದು, ಪ್ರಭಾರ ನಿರ್ದೇಶಕರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂಸ್ಥೆಯ ಬೈಲಾ ಪ್ರಕಾರ ಆಡಳಿತಾತ್ಮಕ ವಿಷಯಗಳಾದ ಸಿಬ್ಬಂದಿ ಸೇವಾ ವಿಷಯ, ಹಣಕಾಸು ನಿರ್ವಹಣೆ, ಸಂಗ್ರಹಣೆ, ಖರೀದಿ, ಮಾವನ ಸಂಪನ್ಮೂಲ ನಿರ್ವಹಣೆ ಸೇರಿ ಇನ್ನಿತರೆ ವಿಷಯಗಳ ಪೂರ್ಣ ಜವಾಬ್ದಾರಿಯನ್ನು ಈ ಹಿಂದಿನಂತೆ ನಿರ್ದೇಶಕರಿಗೆ ವಹಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಿದೆ.
ಸಂಸ್ಥೆಯಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರ ಮತ್ತು ಅಕ್ರಮಗಳಿಗೆ ಸಂಬಂಧಿಸಿ ತನಿಖೆ ನಡೆಸಿ ವರದಿ ಪಡೆಯಲು ಐಎಎಸ್ ಅಧಿಕಾರಿ ಡಾ. ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಅದರಂತೆ ಪರಿಶೀಲನೆ ನಡೆಸಿದ ಸಮಿತಿಯು ಟೆಂಡರ್ ಪ್ರಕ್ರಿಯೆಗಳಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ, ಹೊರಗುತ್ತಿಗೆ ಆಧಾರದ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳ ಮೇಲ್ವಿಚಾರಣೆ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ, ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿಯಲ್ಲಿ ವ್ಯತ್ಯಯ, ರೋಗಿಗಳ ಕಲ್ಯಾಣಕ್ಕಾಗಿ ನಿಯೋಜಿತ ಯೋಜನೆಗಳ ಪೂರ್ಣ ಉದ್ದೇಶಗಳು ಈಡೇರದಿರುವುದು ಸೇರಿ ಸಂಸ್ಥೆಯಲ್ಲಿ ಆಡಳಿತ ನಿರ್ವಹಣೆಯಲ್ಲಿ ಸಮಸ್ಯೆಗಳ ಕುರಿತು ವರದಿ ನೀಡಿತ್ತು. ಜತೆಗೆ ಸಂಸ್ಥೆಯ ಮೇಲ್ವಿಚಾರಣೆಗಾಗಿ ಆಡಳಿತಾಧಿಕಾರಿ ನೇಮಿಸುವಂತೆ ಶಿಾರಸು ಮಾಡಿತ್ತು.
ಸಮಿತಿ ವರದಿ ಅನ್ವಯ ಸರ್ಕಾರ ಸಂಸ್ಥೆಯ ಅಕ್ರಮಗಳ ಪರಿಶೀಲನೆ ಹಾಗೂ ಕಾರ್ಯಚಟುವಟಿಕೆಗಳನ್ನು ಸರಿಪಡಿಸಲು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ 1960ರ ಅನ್ವಯ ಸರ್ಕಾರ ಪ್ರದತ್ತವಾದ ಅಧಿಕಾರ ಬಳಸಿ ಐಎಎಸ್ ಅಧಿಕಾರಿಗಳನ್ನು ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ಆದೇಶಿಸಿತ್ತು. ಈ ಅವಧಿಯಲ್ಲಿ ಐಎಎಸ್ ಅಧಿಕಾರಿಗಳಾದ ಮಂಜುಳಾ, ಡಾ. ನವೀನ್ ಭಟ್ ಹಾಗೂ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರುಗಳು ಸಂಸ್ಥೆಯ ಆಡಳಿತಾಧಿಕಾರಿ ಹುದ್ದೆಯನ್ನು ನಿರ್ವಹಿಸಿದ್ದರು. ಇದೀಗ ಸರ್ಕಾರ ಆಡಳಿತಾಧಿಕಾರಿ ಹುದ್ದೆಯನ್ನು ಕರ್ತವ್ಯದಿಂದ ಹಿಂಪಡೆದಿದ್ದು, ಸಂಸ್ಥೆಯ ಎಲ್ಲ ಆಡಳಿತಾತ್ಮಕ ವಿಷಯಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ದೇಶಕರಿಗೆ ನೀಡಿ ಆದೇಶಿಸಲಾಗಿದೆ.