

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಪ್ರಕ್ರಿಯೆ ಸೇರಿ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಸಿ ವರದಿ ನೀಡುವ ಸಲುವಾಗಿ ತಜ್ಞರಸಮಿತಿ ರಚಿಸಿ ಸರ್ಕಾರ ಅದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಹಾಗೂ ಖಜಾನೆ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕ ಗುರುಸ್ವಾಮಿ ಮತ್ತು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಆಯುಕ್ತ ಮಹದೇವ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ತನಿಖೆಯನ್ನು 15 ದಿನಗಳಲ್ಲಿ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಂಸ್ಥೆಯಲ್ಲಿನ ಕೆಲ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಾಲ್ಕು ಪುಟಗಳ ವರದಿ ಸಹಿತ ದೂರು ನೀಡಿ, ತನಿಖೆಗೆ ಒತ್ತಾಯಿಸಿದ್ದರು. ಸಂಸ್ಥೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಟೆಂಡರ್ ಹಾಗೂ ಔಷಧ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಇದಲ್ಲದೆ ಸಂಸ್ಥೆಯಲ್ಲಿನ ಅವ್ಯವಸ್ಥೆ ಕುರಿತು ಪತ್ರಿಕೆಗಳಲ್ಲಿ ವರದಿಗಳು ಸಹ ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಎರಡು ವಾರದೊಳಗೆ ಪಾರದರ್ಶಕ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಯವರ ಕಚೇರಿಯಿಂದ ಅದೇಶ ಹೊರಡಿಸಲಾಗಿತ್ತು.