ನೋಂದಣಿಯಾದ ಕೂಡಲೇ ರೋಗಿಗಳ ದಾಖಲಾತಿ: ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ಸುತ್ತೋಲೆ

Kidwai - 2
Published on

ಬೆಂಗಳೂರು

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವ ರೋಗಿಗಳು ನೋಂದಣಿ ಮಾಡಿಸಿಕೊಂಡ ತಕ್ಷಣವೇ ಒಳರೋಗಿಯಾಗಿ ದಾಖಲಿಸಿಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಶುಕ್ರವಾರ ಸಂಸ್ಥೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೂ ಸಂಸ್ಥೆಯಲ್ಲಿನ ಹಾಸಿಗೆಗಳ ಭರ್ತಿ ಶೇ.70ಕ್ಕೂ ಕಡಿಮೆ ಇದೆ ಏಕೆ ಎಂದು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ವೈದ್ಯಾಧಿಕಾರಿಗಳು, ಕ್ಯಾನ್ಸರ್ ಖಚಿತತೆ ಬಗ್ಗೆ ವರದಿ ಬಂದು ರೋಗ ದೃಢಪಟ್ಟ ಬಳಿಕವಷ್ಟೇ ಒಳರೋಗಿಯನ್ನಾಗಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಸ್ಥೆಯು ತನ್ನ ನೀತಿಯನ್ನು ಬದಲಾಯಿಸಿಕೊಂಡು, ರೋಗಿಗಳು ನೋಂದಣಿಯಾದ ಕೂಡಲೇ ವಾರ್ಡ್‌ಗಳಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕಿದ್ವಾಯಿಗೆ ಬರುವ ಬಹುತೇಕ ರೋಗಿಗಳು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಅಂತಿಮ ವರದಿ ಬರುವವರೆಗೂ ಬೆಂಗಳೂರಿನಲ್ಲಿ ಖಾಸಗಿ ವಸತಿ ಸೌಕರ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ವ್ಯವಸ್ಥೆ ಅಗತ್ಯವಿಲ್ಲದಿರಬಹುದು, ದೂರದ ಪ್ರದೇಶಗಳಿಂದ ಬರುವ ರೋಗಿಗಳಿಗೆ ಕಾಯುವುದು ತುಂಬಾ ಕಷ್ಟವಾಗುತ್ತದೆ. ಅಲ್ಲದೆ, ಅಂತಿಮ ವರದಿಗಳನ್ನು ನೀಡಲು ಒಂದೆರಡು ದಿನಗಳಾಗಬಹುದು. ಈ ಅವಧಿಯಲ್ಲಿ ಒಳರೋಗಿಗಳಾಗಿ ದಾಖಲಾಗಲು ಬಯಸುವವರಿಗೆ ಒಪ್ಪಿಗೆ ಪತ್ರ ಒದಗಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ವರದಿಗಳಿಗಾಗಿ ಕಾಯುತ್ತಿರುವ ರೋಗಿಗಳಿಗೆ ಉಚಿತ ವಸತಿಯ ಜತೆಗೆ ಊಟ ನೀಡಬೇಕು. ಸಂಸ್ಥೆಯಲ್ಲಿ ಹಾಸಿಗೆಗಳು ಲಭ್ಯವಿದ್ದಾಗ ರೋಗಿಗಳನ್ನು ಧರ್ಮಶಾಲೆಗೆ ಕಳುಹಿಸುವ ಬದಲು, ವಾರ್ಡ್‌ಗಳಲ್ಲಿಯೇ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಹಾಸಿಗೆಗಳು ಭರ್ತಿಯಾಗಿದ್ದರೆ ಧರ್ಮಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಿ. ವಿಶೇಷ ವಾರ್ಡ್, ಶಾಂತಿಧಾಮ ಮತ್ತು ಅನಿಕೇತನ, ಅರೆ ವಿಶೇಷ ವಾರ್ಡ್ ಅನ್ನು ಸಾಮಾನ್ಯ ವಾರ್ಡ್‌ಗಳಾಗಿ ಪರಿವರ್ತಿಸಿ ರೋಗಿಗಳಿಗೆ ದಾಖಲಾತಿಯಲ್ಲಿ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತ ರಾಥೋಡ್, ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ವೈ. ನವೀನ್ ಭಟ್ ಮತ್ತು ನಿರ್ದೇಶಕ ಡಾ. ನವೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net