ಆಪರೇಷನ್ ಹೆಸರಿಗಷ್ಟೇ ಉಚಿತ: ಲಕ್ಷಾಂತರ ರೂ. ಹೊರೆ ಖಚಿತ

Nephro
Published on


ಬೆಂಗಳೂರು: ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಮಹತ್ವದ ಯೋಜನೆಗಳಲ್ಲಿ ‘ಅಂಗಾಂಗ ಕಸಿ ಯೋಜನೆ’ಯೂ ಒಂದು. ಆದರೆ ಈ ಯೋಜನೆಯಡಿ ಕಿಡ್ನಿ ಕಸಿಗೆ ಒಳಗಾಗುವ ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಲಕ್ಷಾಂತರ ರೂ. ಸುರಿಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಯೋಜನೆಯಡಿ ಕಿಡ್ನಿ, ಯಕೃತ್, ಶ್ವಾಸಕೋಶ, ಪಿತ್ತಕೋಶ, ಹೃದಯ, ಕಣ್ಣು ಕಸಿ ಶಸಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದೆ. ಆದರೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆ್ರೆೆ ಯುರಾಲಜಿ ಸಂಸ್ಥೆಯಲ್ಲಿ ಕಿಡ್ನಿ ಕಸಿಗೆ ಒಳಗಾಗುತ್ತಿರುವ ಬಹುತೇಕ ಬಡ ರೋಗಿಗಳು 2-3 ಲಕ್ಷ ರೂ. ಖರ್ಚು ಮಾಡಿ ಕಸಿ ಶಸಚಿಕಿತ್ಸೆ ಸೌಲಭ್ಯ ಪಡೆಯಬೇಕಾಗಿದೆ.

ಅಗತ್ಯ ವೈದ್ಯಕೀಯ ಪರೀಕ್ಷೆಯ ಸೌಲಭ್ಯ ಇಲ್ಲದಿರುವುದು ಹಾಗೂ ಔಷಧ ಅಲಭ್ಯತೆ ಇದಕ್ಕೆ ಕಾರಣವಾಗಿದೆ. ವಿಕ್ಟೋರಿಯಾ ಆವರಣದಲ್ಲಿ ಇನ್‌ೆಸಿಸ್ ಲ್ಯಾಬ್ ಹಾಗೂ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪ್ರಯೋಗಾಲಯ ಇದೆ. ಆದರೆ ಕಸಿ ಶಸಚಿಕಿತ್ಸೆಗೆ ಪೂರಕವಾಗಿರುವ ಬಹಳಷ್ಟು ಪರೀಕ್ಷೆಗಳನ್ನು ಇಲ್ಲಿ ನಡೆಸುವುದಿಲ್ಲ. ಪರಿಣಾಮ ರೋಗಿಗಳು ಡಿಎನ್‌ಎ ಪರೀಕ್ಷೆ ಸೇರಿ ಬಹುತೇಕ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಮಾಡಿಸಬೇಕಿದೆ.

1.60 ಲಕ್ಷ ರೂ. ಚುಚ್ಚುಮದ್ದು: ಕಸಿ ಶಸಚಿಕಿತ್ಸೆಗೆ ಒಳಗಾಗುವ ರೋಗಿಗೆ ಚಿಕಿತ್ಸೆಗೂ ಒಂದು ತಾಸು ಮುಂಚಿತವಾಗಿ ಹಾಗೂ ಶಸಚಿಕಿತ್ಸೆ ನಡೆದ ಮೂರು ದಿನಗಳ ನಂತರ ಚುಚ್ಚುಮದ್ದು ನೀಡಬೇಕಾಗುತ್ತದೆ. ಈ ಚುಚ್ಚುಮದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಕಾರಣ ರೋಗಿಗಳು ಹೊರಗಿನಿಂದ 1.60 ಲಕ್ಷ ರೂ. ಪಾವತಿಸಿ ತರಿಸಬೇಕು. ಇಲ್ಲವಾದಲ್ಲಿ ಕಸಿ ಶಸಚಿಕಿತ್ಸೆಗೆ ಒಳಗಾಗಲು ಸಾಧ್ಯವಿಲ್ಲ. ಈ ಇಂಜೆಕ್ಷನ್‌ಗಾಗಿ ಆಸ್ಪತ್ರೆ ವತಿಯಿಂದ ನೀಡಲಾಗುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ತಂದುಕೊಡುತ್ತಾರೆ. ಆದರೆ ಹಣ ರೋಗಿ ಪಾವತಿಸಬೇಕಿದೆ.

ಸಂಬಂಧಿಕರೇ ದಾನಿಗಳು: ಸಂಸ್ಥೆಯಲ್ಲಿ ನಡೆಯುವ ಬಹುತೇಕ ಕಸಿ ಶಸಚಿಕಿತ್ಸೆಯಲ್ಲಿ ದಾನಿಗಳು ಸಂಬಂಧಿಕರೇ ಆಗಿರುತ್ತಾರೆ. ಆದಾಗಿಯೂ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ. ಸಂಸ್ಥೆಯಲ್ಲಿ ವಾರ್ಷಿಕ 30ಕ್ಕೂ ಅಧಿಕ ಕಿಡ್ನಿ ಕಸಿ ಶಸಚಿಕಿತ್ಸೆ ನಡೆಯುತ್ತದೆ. ಹಾಗಿದ್ದಮೇಲೆ ಅದಕ್ಕೆ ಅಗತ್ಯವಾದ ಪರೀಕ್ಷೆಯ ವ್ಯವಸ್ಥೆಯನ್ನೂ ಮಾಡಬೇಕಿದೆ. ಆದರೆ ಅದ್ಯಾವುದನ್ನೂ ಮಾಡದೆ ಯೋಜನೆಯಡಿ ‘ಉಚಿತ ಚಿಕಿತ್ಸೆ’ ಎಂದು ಹೇಳಲಾಗಿದೆ. ಇದರಿಂದ ಚಿಕಿತ್ಸೆ ಬರುವವರಲ್ಲಿ ಕೆಲವರು ಹಣ ಖರ್ಚು ಮಾಡಲಾಗದೆ ಚಿಕಿತ್ಸೆ ಪಡೆಯದೆ ವಾಪಸ್ ತೆರಳಿರುವ ಉದಾಹರಣೆಗಳೂ ಇವೆ. ಇನ್ನೂ ಕೆಲವರು ಚಿಕಿತ್ಸೆಯ ಖರ್ಚಿಗೆ ನೆರವು ಕೋರಿ ದಾನಿಗಳ ಮೊರೆ ಹೋಗುತ್ತಿದ್ದಾರೆ.

ಅಂಗಾಂಗ ಕಸಿಗೆ ಸರ್ಕಾರ ಭರಿಸುವ ವೆಚ್ಚ: ಯೋಜನೆಯಡಿ ಸರ್ಕಾರ ಕಿಡ್ನಿ ಕಸಿ ಶಸಚಿಕಿತ್ಸೆಗಾಗಿ 3 ಲಕ್ಷ ರೂ. ನೀಡಲಿದೆ. ಆದರೆ ಪ್ರತಿ ರೋಗಿಯೂ ಪ್ರಯೋಗಾಲಯ ಪರೀಕ್ಷೆ ಮತ್ತು ಇಂಜೆಕ್ಷನ್ ಸೇರಿ ಅಗತ್ಯ ಔಷಧಿ ಖರೀದಿಗಾಗಿ 2-3 ಲಕ್ಷ ಸ್ವಂತ ಹಣ ಖರ್ಚು ಮಾಡಬೇಕಿದೆ. ಕಡುಬಡವರಿಗೆ ಈ ಯೋಜನೆ ಗಗನಕುಸುವಾಗಿದೆ. ಸರ್ಕಾರಿ ಕಸಿ ಶಸಚಿಕಿತ್ಸೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ರೋಗಿಗಳ ಕುಟುಂಬಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಮ್ಮದು ಬಡ ಕುಟುಂಬ, ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕಿಡ್ನಿ ಸಮಸ್ಯೆ ಆಯಿತು. ತಾಯಿಯೇ ಕಿಡ್ನಿ ದಾನ ಮಾಡಿದರು. ಅಂಗಾಂಗ ಕಸಿ ಯೋಜನೆಯಡಿ ನೆ್ರೆೆ ಯುರಾಲಜಿ ಸಂಸ್ಥೆಯಲ್ಲಿ ಕಸಿ ಶಸಚಿಕಿತ್ಸೆಗೆ ಒಳಗಾದೆ. ಬಿಪಿಎಲ್ ಕಾರ್ಡು ಹೊಂದಿದ್ದರೂ ಸಾಲ ಮಾಡಿ 3 ಲಕ್ಷ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕಾಯಿತು. - ಕಿಡ್ನಿ ಕಸಿಗೆ ಒಳಗಾದ ರೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net